
ಲಂಡನ್: ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್, ತಾನು ದೈಹಿಕ ಮತ್ತು ಮಾನಸಿಕ ಆಘಾತದಿಂದ ಬಳಲುತ್ತಿದ್ದು, ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಭಾರತ ಮೂಲದ ಬ್ರಿಟಿಷ್ ಪ್ರಜೆಯಾಗಿರುವ ವಿಶ್ವಾಸ್, ಇಂಗ್ಲೆಂಡ್‌ಗೆ ಮರಳುವ ವೇಳೆ ವಿಮಾನ ಅಪಘಾತ ಸಂಭವಿಸಿತ್ತು. ಅವರ ಸಹೋದರ ಅಜಯ್ ಸೇರಿದಂತೆ 242 ಜನರು ವಿಮಾನ ದುರಂತದಲ್ಲಿ ಬಲಿಯಾಗಿದ್ದರು.
ಭೀಕರ ದುರಂತದಿಂದ ಪಾರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ವಿಶ್ವಾಸ್, ಕಳೆದ ತಿಂಗಳು ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್‌ನಲ್ಲಿರುವ ತಮ್ಮ ಮನೆಗೆ ಮರಳಿದ್ದರು. ಆದರೆ ಪಿಟಿಎಸ್‌ಡಿನಿಂದ(ಪೋಸ್ಟ್–ಟ್ರಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್) ಬಳಲುತ್ತಿರುವ ಅವರು ಸೂಕ್ತ ಚಿಕಿತ್ಸೆ ಪಡೆಯಲು ಹೆಣಗಾಡುತ್ತಿರುವುದಾಗಿ ಹೇಳಿದ್ದಾರೆ.
'ನನ್ನ ಪತ್ನಿ ಮನೆಯನ್ನು ನಿಭಾಯಿಸುತ್ತಿದ್ದು, ಇಡೀ ದಿನ ಕೋಣೆಯಲ್ಲಿ ಕಳೆಯುತ್ತಿದ್ದೇನೆ' ಎಂದು ವಿಶ್ವಾಸ್ ಸಂಕಷ್ಟ ತೋಡಿಕೊಂಡಿದ್ದಾರೆ. ಅವರಿಗೆ 4 ವರ್ಷದ ಮಗನಿದ್ದಾನೆ.
ವಿಶ್ವಾಸ್ ಅವರ ಪರಿಸ್ಥಿತಿಯ ಬಗ್ಗೆ ಸಂಬಂಧಿತ ಸಂಸ್ಥೆಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಲೀಸೆಸ್ಟರ್ ಕಮ್ಯುನಿಟಿ ಗ್ರೂಪ್ ಈ ಸಂದರ್ಶನವನ್ನು ಏರ್ಪಡಿಸಿತ್ತು. ‘ಮಾನಸಿಕವಾಗಿ ನಾನು ಸಂಪೂರ್ಣ ಛಿದ್ರನಾಗಿದ್ದೇನೆ... ಇದು ತುಂಬಾ ನೋವಿನ ಸಂಗತಿ’ ಎಂದು ಮಾಧ್ಯಮದ ಮುಂದೆ ವಿಶ್ವಾಸ್ ನೊಂದು ನುಡಿದಿದ್ದಾರೆ.
ಯುಕೆ ಮೂಲದ ನಿವೃತ್ತ ವಕೀಲ ರಾಡ್ ಸೀಗರ್ ಅವರು ವಿಶ್ವಾಸ್ ಬೆಂಬಲಕ್ಕೆ ನಿಂತಿದ್ದು, ಅವರ ಕುಟುಂಬವನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆ ತಿಳಿಯುವಂತೆ ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರಿಗೆ ಮನವಿ ಮಾಡಿದ್ದಾರೆ. 'ನಿಮ್ಮ ಸಂಸ್ಥೆ ನೀಡುವ ಮಧ್ಯಂತರ ಪರಿಹಾರವು ಅವರ ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ' ಎಂದು ತಿಳಿಸಿದ್ದಾರೆ.
‘ವಿಶ್ವಾಸ್ ಕುಟುಂಬಕ್ಕೆ ಸಹಾಯದ ಅಗತ್ಯ ತುಂಬಾ ಇದೆ. ಒಂದು ಕಡೆ ದೈಹಿಕ ಗಾಯ, ಮತ್ತೊಂದೆಡೆ ಮಾನಸಿಕವಾಗಿ ಅವರು ಕುಗ್ಗಿ ಹೋಗಿದ್ದಾರೆ. ಜೂನ್ ದುರಂತದ ನಂತರ ದಿಯುವಿನಲ್ಲಿ ಅವರ ಕುಟುಂಬ ನಡೆಸುತ್ತಿದ್ದ ಮೀನುಗಾರಿಕೆ ವ್ಯವಹಾರವು ನಷ್ಟದ ಹಾದಿ ಹಿಡಿದಿದೆ. ಇದರಿಂದ ಅವರು ಆರ್ಥಿಕವಾಗಿ ಕುಗ್ಗಿದ್ದಾರೆ’ ಎಂದು ಸೀಗರ್ ಹೇಳಿದ್ದಾರೆ.
‘ದಿನವಿಡೀ ಒಬ್ಬಂಟಿಯಾಗಿರುವ ಅವರು ಕೋಣೆಯ ಮೂಲೆಯಲ್ಲಿ ಮಲಗಿಕೊಂಡಿರುತ್ತಾರೆ. ಮಾನಸಿಕವಾಗಿ ಬಳಲುತ್ತಿದ್ದಾರೆ. ನಿಜವಾಗಿಯೂ ಅವರಿಗೆ ಸಹಾಯದ ಅಗತ್ಯವಿದೆ. ಕ್ಯಾಂಪ್‌ಬೆಲ್ ಅವರು ಇಲ್ಲಿಗೆ ತುರ್ತಾಗಿ ಭೇಟಿ ಕೊಡಬೇಕು’ ಎಂದು ಭಿನ್ನವಿಸಿದ್ದಾರೆ.
‘ಅಪಘಾತದಲ್ಲಿ ಅವರು ಎಷ್ಟು ನೋವು ಅನುಭವಿಸಿದ್ದರು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ಈ ಭೂಮಿಯ ಮೇಲಿರುವ ಯಾವ ಜೀವಿಯೂ ಅವರ ನೋವನ್ನು ಅನುಭವಿಸಿಲ್ಲ’ ಎಂದು ದುಃಖ ಹೊರಹಾಕಿದ್ದಾರೆ.
‘ವಿಶ್ವಾಸ್ ಅವರನ್ನು ಬಿಟ್ಟು ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಅವರು ಮಾನಸಿಕವಾಗಿ ಏನನ್ನು ಎದುರಿಸುತ್ತಿದ್ದಾರೆಂದು ನಾವು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಅವರಿಗೆ ಮಾನಸಿಕ ತಜ್ಞರ ಸಹಾಯದ ಅಗತ್ಯವಿದೆ’ ಎಂದು ಹೇಳಿದ್ದಾರೆ.
ವಿಶ್ವಾಸ್ ಅವರ ತವರೂರಾದ ದಿಯುಗೆ ಮುಂದಿನ ವಾರ ಪ್ರಯಾಣ ಬೆಳೆಸುತ್ತಿರುವುದಾಗಿ ಸೀಗರ್ ಇದೇ ವೇಳೆ ತಿಳಿಸಿದ್ದಾರೆ.
ಏತನ್ಮಧ್ಯೆ, ವಿಶ್ವಾಸ್ ಅವರಿಗೆ ಸಹಾಯ ಮಾಡುವುದಾಗಿ ಏರ್ ಇಂಡಿಯಾ ತಿಳಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆ, ಶೀಘ್ರದಲ್ಲೇ ಅವರ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದೆ.
ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್‌ನ 787-8 ಡ್ರೀಮ್‌ಲೈನರ್ ವಿಮಾನವು ಟೇಕಾಫ್ ಆದ ಕೆಲ ಕ್ಷಣಗಳಲ್ಲೇ ಪತನವಾಗಿತ್ತು. ವಿಮಾನದ 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಪವಾಡಸದೃಶವಾಗಿ ಬದುಕುಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.