ADVERTISEMENT

ಎಲ್ಲ ಮೂಲದ ಆದಾಯಕ್ಕೂ ತೆರಿಗೆ ಪಾವತಿ: ಅಕ್ಷತಾ ಮೂರ್ತಿ ನಿರ್ಧಾರ

ಪತಿ, ಸಚಿವ ರಿಷಿ ಸುನಕ್, ಕುಟುಂಬದ ನೆಮ್ಮದಿ ಮುಖ್ಯ ಎಂದು ಸ್ಪಷ್ಟನೆ

ಪಿಟಿಐ
Published 9 ಏಪ್ರಿಲ್ 2022, 19:31 IST
Last Updated 9 ಏಪ್ರಿಲ್ 2022, 19:31 IST
ಅಕ್ಷತಾ ಮೂರ್ತಿ–ರಿಷಿ ಸುನಕ್‌ ದಂಪತಿ
ಅಕ್ಷತಾ ಮೂರ್ತಿ–ರಿಷಿ ಸುನಕ್‌ ದಂಪತಿ   

ಲಂಡನ್‌: ‘ತೆರಿಗೆ ಪಾವತಿ ಕುರಿತ ಎಲ್ಲ ಗೊಂದಲಗಳನ್ನು ಕೊನೆಗಾಣಿಸಲು, ಭಾರತದಲ್ಲಿ ಗಳಿಸಿದ ಆದಾಯವೂ ಸೇರಿದಂತೆ ತನ್ನ ಎಲ್ಲ ಆದಾಯಗಳಿಗೆ ಇಂಗ್ಲೆಂಡ್‌ನಲ್ಲಿ ತೆರಿಗೆ ಪಾವತಿಸುತ್ತೇನೆ’ ಎಂದು ಉದ್ಯಮಿ ಅಕ್ಷತಾ ಮೂರ್ತಿ ಹೇಳಿದ್ದಾರೆ.

‘ಬ್ರಿಟನ್‌ನ ಹಣಕಾಸು ಸಚಿವ, ಪತಿ ರಿಷಿ ಸುನಕ್‌ ಅವರಿಗೆ ಆಗುತ್ತಿರುವ ಚಿತ್ತಕ್ಷೋಭೆಯನ್ನು ತಪ್ಪಿಸುವುದು ಇದರ ಉದ್ದೇಶ.ತೆರಿಗೆ ಕುರಿತಂತೆ ನನ್ನ ಸ್ಥಾನಮಾನ ಪರಿಣಾಮವು ಪತಿ ಅಥವಾ ನನ್ನ ಕುಟುಂಬದ ಮೇಲೆ ಆಗುವುದನ್ನು ನಾನು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಅಕ್ಷತಾ ಅವರು ಭಾರತದ ಉದ್ಯಮಿ, ಇನ್ಫೋಸಿಸ್‌ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಪುತ್ರಿ.

‘ನನ್ನ ತೆರಿಗೆ ಪಾವತಿಯ ವ್ಯವಸ್ಥೆಯನ್ನು ಕುರಿತು ಜನರುಇತ್ತೀಚಿಗೆ ಪ್ರಶ್ನಿಸುತ್ತಿದ್ದಾರೆ. ಅವರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ಇಂಗ್ಲೆಂಡ್‌ನಲ್ಲಿ ಗಳಿಸಿದ ಆದಾಯಕ್ಕಾಗಿ ನಾನು ದೇಶಕ್ಕೆ ತೆರಿಗೆ ಪಾವತಿಸಿದ್ದೇನೆ. ಅಲ್ಲದೇ, ಅಂತರರಾಷ್ಟ್ರೀಯ ಆದಾಯಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ತೆರಿಗೆಯನ್ನೂ ಪಾವತಿಸಿದ್ದೇನೆ’ ಎಂದಿದ್ದಾರೆ. ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ADVERTISEMENT

‘ನಾನು ವಿನಾಯಿತಿ ಬಯಸುವುದಿಲ್ಲ.ಲಾಭಾಂಶ, ಬಂಡವಾಳ ಆದಾಯ ಒಳಗೊಂಡಂತೆ ಜಗತ್ತಿನ ಎಲ್ಲ ಭಾಗದಲ್ಲಿ ಗಳಿಸಿದ ಆದಾಯಕ್ಕೂ ನಾನು ಇಂಗ್ಲೆಂಡ್‌ನಲ್ಲಿ ತೆರಿಗೆ ಭರಿಸುತ್ತೇನೆ. ತಕ್ಷಣವೇ ಈ ಕ್ರಮ ಆರಂಭವಾಗಲಿದೆ’ಎಂದಿದ್ದಾರೆ.

‘ನನ್ನ ತೆರಿಗೆ ವ್ಯವಸ್ಥೆ ಪೂರ್ಣ ಕಾನೂನುಬದ್ಧವಾಗಿದೆ. ಇಂಗ್ಲೆಂಡ್‌ನಲ್ಲಿ ಎಷ್ಟು ಜನ ನಿವಾಸಿಯೇತರರಿಗೆ ತೆರಿಗೆ ಹಾಕಲಾಗಿದೆ? ನನ್ನ ಪತಿ ಸ್ಥಾನಮಾನ ಕಾರಣದಿಂದಲೇ ಈ ಬೆಳವಣಿಗೆಗಳು ನಡೆದಿವೆ ಎಂಬುದು ಸ್ಪಷ್ಟವಾಗುತ್ತದೆ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

ತೆರಿಗೆ ಪಾವತಿಯಿಂದ ದೂರ ಉಳಿಯುವ ಉದ್ದೇಶದಿಂದಲೇ ಬ್ರಿಟನ್‌ನಲ್ಲಿ ನಿವಾಸಿಯೇತರ ಸ್ಥಾನಮಾನವನ್ನು ಅಕ್ಷತಾ ಹೊಂದಿದ್ದಾರೆ ಎಂದು ಆರೋಪಿಸಿದ್ದ ವಿರೋಧಪಕ್ಷಗಳು, ಈ ಸಂಬಂಧ ಅವರ ಪತಿ ರಿಷಿ ಸುನಕ್ ವಿರುದ್ಧ ವಾಗ್ದಾಳಿ ನಡೆಸಿದ್ದವು.

ಭಾರತ ಮೂಲದ ಇನ್ಫೋಸಿಸ್‌ ಸಂಸ್ಥೆಯಲ್ಲಿ 0.9ರಷ್ಟು ಷೇರು ಪಾಲು ಹೊಂದಿರುವ ಅಕ್ಷತಾ ಅವರು, ಇದರ ಆಧಾರದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಲಾಭಾಂಶವಾಗಿ ಪಡೆಯಲಿದ್ದಾರೆ.

ಬ್ರಿಟನ್‌ನಲ್ಲಿ ಒಂಬತ್ತು ವರ್ಷಗಳಿಂದ ನೆಲೆಸಿರುವ ಅಕ್ಷತಾ, ಇಂಗ್ಲೆಂಡ್ ಅನ್ನು ‘ಅದ್ಭುತ ರಾಷ್ಟ್ರ’ ಎಂದು ಬಣ್ಣಿಸಿದ್ದಾರೆ. ಲಂಡನ್‌ ಮತ್ತು ಪತಿ ಸುನಕ್‌ ಪ್ರತಿನಿಧಿಸುವ ನಾರ್ಥ್‌ ಯಾರ್ಕ್‌ಶೈರ್‌ ಕ್ಷೇತ್ರದಲ್ಲಿ ನನಗೆ ಉತ್ತಮ ಸ್ವಾಗತವೇ ದೊರೆತಿದೆ ಎಂದಿದ್ದಾರೆ.

ರಿಷಿ ವಿರುದ್ಧ ಮುಂದುವರಿದ ವಾಗ್ದಾಳಿ

ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್‌ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ಮುಂದುವರಿಸಿವೆ.‘ಅವರದು ರಾಜಕೀಯ ಬೂಟಾಟಿಕೆ, ಪಾರದರ್ಶಕತೆ ಇಲ್ಲ’ ಎಂಬ ಟೀಕೆಗಳು ಕೇಳಿಬಂದಿವೆ.

‘ತಾವು ಅಮೆರಿಕದ ಗ್ರೀನ್‌ ಕಾರ್ಡ್‌ ಹೊಂದಿದ್ದು, ಕಳೆದ ಅಕ್ಟೋಬರ್‌ವರೆಗೂ ಅಮೆರಿಕದ ಶಾಶ್ವತ ಪೌರತ್ವವಿತ್ತು’ ರಿಷಿ ಸುನಕ್‌ ಒಪ್ಪಿಕೊಂಡ ಹಿಂದೆಯೇ ಈ ಟೀಕೆಗಳು ವ್ಯಕ್ತವಾಗಿವೆ.

ಲೇಬರ್‌ ಪಕ್ಷದ ನಾಯಕಿ ಲೂಯಿಸ್‌ ಹೇಗ್ ಅವರು, ‘ಕುಟುಂಬದ ತೆರಿಗೆ ವ್ಯವಹಾರ ಕುರಿತಗೊಂದಲಗಳು ಹಲವು ಬಾರಿ ರಿಷಿ ಅವರನ್ನು ಸುತ್ತುವರೆದಿವೆ ಎಂದಿದ್ದಾರೆ. ‘ಅಕ್ಷತಾ ಅವರ ನಿವಾಸಿಯೇತರ ಸ್ಥಾನಮಾನ, ತೆರಿಗೆ ವ್ಯಾಪ್ತಿಯಿಂದ ಸಾಗರೋತ್ತರ ಆದಾಯವನ್ನು ಹೊರಗಿಟ್ಟಿರುವುದು ಕಾನೂನು ಪ್ರಕಾರ ಸರಿ’ ಎಂದಿದ್ದಾರೆ.

ಸುನಕ್‌ ಅವರು ಗ್ರೀನ್ ಕಾರ್ಡ್‌ ಹೊಂದಿದ್ದರು ಎಂಬ ಬಗ್ಗೆ ಪ್ರತಿಕ್ರಿಯಿಸಲು ಶ್ವೇತಭವನ ನಿರಾಕರಿಸಿದೆ. ಸಚಿವರಾಗುವ ಮುನ್ನ ಕಳೆದ ಅಕ್ಟೋಬರ್‌ನಲ್ಲಿ ಗ್ರೀನ್‌ ಕಾರ್ಡ್‌ ಹಿಂದಿರುಗಿಸಿದ್ದಾಗಿ ಸುನಕ್ ಹೇಳಿದ್ದರು.

ಅಮೆರಿಕದ ಕಾಯ್ದೆಯ ಪ್ರಕಾರ, ಗ್ರೀನ್ ಕಾರ್ಡ್ ಹೊಂದಿರುವುದರ ಅರ್ಥ, ‘ಅಮೆರಿಕದಲ್ಲಿ ವಾಸಿಸಲು ಮತ್ತು ಅಮೆರಿಕದ ತೆರಿಗೆ ಪಾವತಿಸಲು ಸಮ್ಮತಿಸಿದ್ದಾರೆ’ ಎಂಬುದಾಗಿದೆ. ರಿಷಿ ಸುನಕ್‌ ಮತ್ತು ಅಕ್ಷತಾ ಮೂರ್ತಿ ಅವರು ಅಮೆರಿಕದಲ್ಲಿ ಅಧ್ಯಯನ ಮಾಡುವಾಗಿ ಪರಿಚಿತರಾಗಿ, ಆಪ್ತರಾಗಿದ್ದರು. 2009ರಲ್ಲಿ ವಿವಾಹವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.