ADVERTISEMENT

ಮ್ಯಾನ್ಮಾರ್‌: ಬಂಧಿತ ನಾಯಕರ ಬಿಡುಗಡೆಗೆ ಅಮೆರಿಕ ಆಗ್ರಹ

ಸೇನೆಯಿಂದ ಕ್ಷಿಪ್ರ ದಂಗೆ: ಅಂಗ್‌ ಸಾನ್‌ ಸೂ ಕಿ ಸೇರಿ ಹಲವರ ಬಂಧನ

ಪಿಟಿಐ
Published 1 ಫೆಬ್ರುವರಿ 2021, 7:11 IST
Last Updated 1 ಫೆಬ್ರುವರಿ 2021, 7:11 IST
ಮ್ಯಾನ್ಮಾರ್‌ನಲ್ಲಿ ಸೇನೆ ದಂಗೆ ಎದ್ದು, ರಾಜಕೀಯ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಮ್ಯಾನ್ಮಾರ್‌ ಮೂಲದ ವ್ಯಕ್ತಿ ಟೋಕಿಯೊದಲ್ಲಿ ಪ್ರತಿಭಟಿಸಿದ್ದು ಹೀಗೆ  –ರಾಯಿಟರ್ಸ್‌ ಚಿತ್ರ
ಮ್ಯಾನ್ಮಾರ್‌ನಲ್ಲಿ ಸೇನೆ ದಂಗೆ ಎದ್ದು, ರಾಜಕೀಯ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಮ್ಯಾನ್ಮಾರ್‌ ಮೂಲದ ವ್ಯಕ್ತಿ ಟೋಕಿಯೊದಲ್ಲಿ ಪ್ರತಿಭಟಿಸಿದ್ದು ಹೀಗೆ  –ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್‌: ಮ್ಯಾನ್ಮಾರ್‌ನಲ್ಲಿನ ಕ್ಷಿಪ್ರ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್‌ ಸೂ ಕಿ ಸೇರಿದಂತೆ ಬಂಧಿಸಿರುವ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

ಮ್ಯಾನ್ಮಾರ್‌ನಲ್ಲಿ ಬೆಳವಣಿಗೆಗಳನ್ನು ಅವಲೋಕಿಸಲಾಗುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಅಮೆರಿಕ ಸಿದ್ಧ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆ ಸಾಕಿ ಹೇಳಿದ್ದಾರೆ.

ಮ್ಯಾನ್ಮಾರ್‌ ಸೇನೆಯು ದೇಶದ ಆಡಳಿತವನ್ನು ಒಂದು ವರ್ಷದ ಅವಧಿಗೆ ತನ್ನ ವಶಕ್ಕೆ ಪಡೆದಿದೆ. ಆಂಗ್‌ ಸಾನ್‌ ಸೂಕಿ ಸೇರಿದಂತೆ ಆಡಳಿತಾರೂಢ ಪಕ್ಷದ ಹಲವು ನಾಯಕರನ್ನು ಸೇನೆ ಬಂಧಿಸಿದೆ ಎಂದು ಸೇನೆ ಒಡೆತನ ಮ್ಯಾವಾಡಿ ಟಿವಿ ವರದಿ ಮಾಡಿದೆ.

ADVERTISEMENT

ದಂಗೆ ವಿರೋಧಿಸಿ: ಸೂ ಕಿ

ನೇಪಿಟಾ, ಮ್ಯಾನ್ಮಾರ್‌ (ಎಪಿ) : ‘ದೇಶದಲ್ಲಿ ಸೇನೆಯ ದಂಗೆಯನ್ನು ವಿರೋಧಿಸಿ’ ಎಂದು ಅಂಗ್‌ ಸಾನ್‌ ಸೂ ಕಿ ನೇತೃತ್ವದ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಪಕ್ಷ ಜನರಿಗೆ ಮನವಿ ಮಾಡಿದೆ.

ಸೂ ಕಿ ಅವರು ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ‘ಸೇನೆಯ ಈ ದಂಗೆಯನ್ನು ಸಮರ್ಥಿಸಲಾಗದು. ಸೇನೆಯ ಈ ನಡೆ ಸಂವಿಧಾನದ ಆಶಯ ಹಾಗೂ ಮತದಾರರ ತೀರ್ಪಿಗೆ ವಿರುದ್ಧವಾಗಿದೆ. ಯಾವುದೇ ಕಾರಣಕ್ಕೂ ದೇಶದಲ್ಲಿ ಮತ್ತೆ ಮಿಲಿಟರಿ ಸರ್ವಾಧಿಕಾರಿ ಆಡಳಿತ ಬರದಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಭಾರತ ಕಳವಳ

ನವದೆಹಲಿ: ‘ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ ಸೇನೆ ದಂಗೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ರಾಜಕೀಯ ಮುಖಂಡರನ್ನು ಬಂಧಿಸಿರುವುದು ತೀವ್ರ ಕಳವಳಕಾರಿ’ ಎಂದು ಭಾರತ ಪ್ರತಿಕ್ರಿಯಿಸಿದೆ.

‘ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಸ್ಥಾಪನೆಯಾಗಬೇಕು ಎಂಬುದನ್ನು ಭಾರತ ಬಯಸುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.