ADVERTISEMENT

Covid-19 World Update| ಕೋವಿಡ್‌ ಕುರಿತು ಇಂದು ತಿಳಿಯಬೇಕಾದ ಮಾಹಿತಿ ಇದು 

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 4:49 IST
Last Updated 15 ಆಗಸ್ಟ್ 2020, 4:49 IST
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಪ್ರತಿಭಟನೆ (ರಾಯಿಟರ್ಸ್‌ ಚಿತ್ರ)
ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಪ್ರತಿಭಟನೆ (ರಾಯಿಟರ್ಸ್‌ ಚಿತ್ರ)   

ಜಗತ್ತಿನಾದ್ಯಂತ 2.1 ಕೋಟಿಗೂ ಅಧಿಕ ಮಂದಿ ಕೊರೊನಾ ವೈರಸ್‌ನ ಸೋಂಕಿತರಾಗಿದ್ದಾರೆ. ಈ ಪೈಕಿ 7,63,323 ಮಂದಿ ಸಾವಿಗೀಡಾಗಿದ್ದಾರೆ.

ಅತಿ ಹೆಚ್ಚು ಕೋವಿಡ್‌ ರೋಗಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎಂದಿನಂತೇ ಅಮೆರಿಕ ಮೊದಲಿದೆ. 53,12,464 ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ 1,68,429 ಮಂದಿ ಮೃತಪಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 32,26,443 ಸೋಂಕಿತರಿದ್ದು, 105,490 ಮಂದಿ ಸಾವಿಗೀಡಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 24,61,190 ಕೋವಿಡ್‌ ಪೀಡಿತರಿದ್ದು, 48,040 ಮಂದಿ ಕೊನೆಯುಸಿರೆಳೆದಿದ್ದಾರೆ.

ನಂತರದ ಸ್ಥಾನದಲ್ಲಿ ರಷ್ಯಾ 9,10,778 (15,467), ದಕ್ಷಿಣ ಆಫ್ರಿಕಾ 5,79,140 (11,556), ಪೆರು 5,16,296 (25,856) ಇದೆ.

ADVERTISEMENT

ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ 60 ಲಕ್ಷ ಸೋಂಕಿತರು

ಕೋವಿಡ್‌ಗೆ ಅಮೆರಿಕ ನಂತರ ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳು ಕೋವಿಡ್‌ನಿಂದ ಹೆಚ್ಚು ಬಾಧೆಗೆ ಒಳಗಾಗಿವೆ. ಇಲ್ಲಿನ ಎಲ್ಲ ರಾಷ್ಟ್ರಗಳ ಒಟ್ಟಾರೆ ಸೋಂಕಿತರ ಸಂಖ್ಯೆ ಶುಕ್ರವಾರ 60 ಲಕ್ಷ ದಾಟಿದೆ. ಬ್ರೆಜಿಲ್‌ ಒಂದರಲ್ಲೇ 32,26,443 ಸೋಂಕಿತರಿದ್ದಾರೆ. ಪೆರುವಿನಲ್ಲಿ 5,16,296 ಸೋಂಕಿತರು, ಚಿಲಿಯಲ್ಲಿ 3,82,111 ಮಂದಿ ಕೋವಿಡ್‌ ಪೀಡಿತರಿದ್ದಾರೆ. ನಿತ್ಯವೂ ಅಲ್ಲಿ 86 ಸಾವಿರಕ್ಕೂ ಅಧಿಕ ಕೊರೊನಾ ವೈರಸ್‌ ಸೋಂಕಿತರು ಪತ್ತೆಯಾಗುತ್ತಿದ್ದು, 2600 ಮಂದಿ ಸಾವಿಗೀಡಾಗುತ್ತಿದ್ದಾರೆ. ಸದ್ಯ ಅಲ್ಲಿ 60,00,005 ಸೋಂಕಿತರಿದ್ದರೆ, 2,37,360 ಮಂದಿ ಮೃತಪಟ್ಟಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ನೂರು ದಿನಗಳ ನಂತರ ತಲೆ ಎತ್ತಿದ ಕೋವಿಡ್‌

ಕಳೆದ ನೂರು ದಿನಗಳ ಕಾಲ ದೇಶದಲ್ಲಿ ಕೊರೊನಾ ವೈರಸ್‌ ಅನ್ನು ತಲೆ ಎತ್ತದಂತೆ ಮಾಡಿದ್ದ ನ್ಯೂಜಿಲೆಂಡ್‌ನಲ್ಲಿ ಏಕಾಏಕಿ ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ಶುಕ್ರವಾರ ಒಂದೇ ದಿನ 7 ಹೊಸ ಪ್ರಕರಣಗಳು ಪತ್ತೆಯಾಗಿವೆ. ನ್ಯೂಜಿಲೆಂಡ್‌ನಲ್ಲಿ ಒಟ್ಟು 1,609 ಸೋಂಕು ಪ್ರಕರಣಗಳಿದ್ದು, 22 ಮಂದಿ ಮೃತಪಟ್ಟಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಸೋಂಕು ನಿಯಂತ್ರಣ ತಪ್ಪುವ ಭೀತಿ

ದಕ್ಷಿಣ ಕೊರಿಯಾದಲ್ಲಿ ಕಳೆದ ಐದು ತಿಂಗಳಲ್ಲೇ ಅತ್ಯಧಿಕ ಪ್ರಮಾಣದ ಕೋವಿಡ್‌ ಪ್ರಕರಣಗಳು ಶನಿವಾರ ಪತ್ತೆಯಾಗಿವೆ. ಹೀಗಾಗಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಿಗದೇ ಹೋಗುವ ಆತಂಕ ಎದುರಾಗಿದೆ. ದೇಶದ ಅರ್ಧ ಜನಸಂಖ್ಯೆಯನ್ನು ಹೊಂದಿರುವ ಸೋಲ್‌ ನಗರದಲ್ಲೇ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗುತ್ತಿರುವುದು ಸರ್ಕಾರವನ್ನು ಕಂಗೆಡಿಸಿದೆ. ಶನಿವಾರ ಅಲ್ಲಿ 166 ಪ್ರಕರಣಗಳು ವರದಿಯಾದವು. ಮಾರ್ಚ್‌ 11ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿವೆ.

ಲಸಿಕೆಯ ಸಾಮೂಹಿಕ ಉತ್ಪಾದನೆ

ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸಲು ಭಾರತದ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಕೂಡಲೇ ಲಸಿಕೆಯಸಾಮೂಹಿಕ ಉತ್ಪಾದನೆ ಆರಂಭವಾಗಲಿದೆ ಎಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.