ADVERTISEMENT

ಉಗ್ರ ಮಸೂದ್ ಅಜರ್‌ಗೆ ನಿರ್ಬಂಧ ಹೇರುವಂತೆ ವಿಶ್ವಸಂಸ್ಥೆಯಲ್ಲಿ ಒತ್ತಾಯ

ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್ ರಾಜತಾಂತ್ರಿಕರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 3:33 IST
Last Updated 28 ಫೆಬ್ರುವರಿ 2019, 3:33 IST
   

ವಿಶ್ವಸಂಸ್ಥೆ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ಸಂಘಟಿಸಿದ್ದ ಜೈಷ್‌–ಎ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ಗೆ ನಿರ್ಬಂಧ ವಿಧಿಸುವಂತೆ ಅಮೆರಿಕ, ಇಂಗ್ಲೆಂಡ್‌ ಹಾಗೂ ಫ್ರಾನ್ಸ್ ದೇಶಗಳ ರಾಜತಾಂತ್ರಿಕರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಉಗ್ರ ಮಸೂದ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಜಾಗತಿಕ ಪ್ರವೇಶಕ್ಕೆ ನಿಷೇಧ ಹೇರುವುದು ಸೇರಿದಂತೆ ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವಂತೆ ಮಾಡಲು ಮೂರನೇ ಬಾರಿಗೆ ಪ್ರಯತ್ನಗಳು ನಡೆದಿವೆ.ಈ ಹಿಂದೆ2016 ಹಾಗೂ 17ರಲ್ಲಿ ಮಸೂದ್‌ಗೆ ನಿರ್ಬಂಧ ಹೇರಲು ಚೀನಾ ಅಡ್ಡಿಪಡಿಸಿತ್ತು. ಈ ಬಾರಿಯೂ ಚೀನಾ ತಕರಾರು ಎತ್ತಲಿದೆ ಎಂದು ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

ಜೆಇಎಂ 2001ರಲ್ಲಿ ತಾನಾಗಿಯೇ ಭಯೋತ್ಪಾದನೆ ಸಂಘಟನೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿತ್ತು. ಇದೀಗ ಫೆಬ್ರುವರಿ 14ರ ಪುಲ್ವಾಮಾ ದಾಳಿಯ ಹೊಣೆಯನ್ನೂ ಹೊತ್ತುಕೊಂಡಿದೆ.ಹೀಗಾಗಿ ಇದರ ನಾಯಕನ ವಿರುದ್ಧ ಮೂರು ರಾಷ್ಟ್ರಗಳು ಮನವಿ ಸಲ್ಲಿಸಿದ್ದು, ಅದನ್ನು ಪರಿಗಣಿಸಲು ಭದ್ರತಾ ಮಂಡಳಿಗೆ 10 ದಿನಗಳ ಕಾಲಾವಕಾಶವಿದೆ.

ADVERTISEMENT

ಫೆಬ್ರುವರಿ 14ರ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೆಇಎಂ ಸಂಘಟನೆಯ ಶಿಬಿರಗಳನ್ನು ಗುರಿಯಾಗಿರಿಸಿ ಭಾರತವೂ ವಾಯುದಾಳಿ ನಡೆಸಿತ್ತು. 1971ರಿಂದ ಈಚೆಗೆ ಭಾರತ ಗಡಿದಾಟಿ ಹೋಗಿ ದಾಳಿ ನಡೆಸಿರುವುದು ಇದೇ ಮೊದಲು. ಹೀಗಾಗಿ ಪಾಕಿಸ್ತಾನವೂ ತಕ್ಕ ಉತ್ತರ ನೀಡುವುದಾಗಿ ಹೇಳಿತ್ತು.

ಅದರಂತೆ ಬುಧವಾರಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ಮೇಲೆ ಪಾಕ್‌ ಪಡೆಗಳು ಶೆಲ್‌ ದಾಳಿ ನಡೆಸಿದ್ದವು. ಅದಲ್ಲದೆ ಆ ದೇಶದಯುದ್ಧ ವಿಮಾನಗಳು ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯುವಲಯ ದಾಟಿ ಒಳನುಸುಳಿದ್ದವು. ಭಾರತೀಯ ಯುದ್ಧ ವಿಮಾನಗಳು ಅವುಗಳನ್ನು ಹಿಮ್ಮೆಟ್ಟಿಸಿ,ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದವು.

ಭಾರತದ ಎರಡು ಜೆಟ್‌ ವಿಮಾನಗಳನ್ನು ಹೊಡೆದುರುಳಿಸಿ ಇಬ್ಬರು ಪೈಲಟ್‌ಗಳನ್ನು ಸೆರೆಹಿಡಿದಿರುವುದಾಗಿ ಪಾಕ್‌ ಹೇಳಿಕೆ ಬಿಡುಗಡೆ ಮಾಡಿತ್ತು. ಬಳಿಕ ಒಬ್ಬ ಪೈಲಟ್‌ಅನ್ನು ಮಾತ್ರವೇ ಸೆರೆ ಹಿಡಿದಿರುವುದಾಗಿ ಮಾತು ಬದಲಿಸಿತ್ತು. ಜೊತೆಗೆ ವಿಡಿಯೊ ಬಿಡುಗಡೆ ಮಾಡಿತ್ತು.ಇದರಿಂದ ಬುಧವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸದ್ಯ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಮಾತನಾಡಿದ್ದು, ಭಾರತ–ಪಾಕಿಸ್ತಾನ ಶಾಂತಿ ಮಾತುಕತೆಗೆ ನೆರವಾಗುವುದಾಗಿ ಹೇಳಿದ್ದಾರೆ. ವಿಶ್ವಸಂಸ್ಥೆಯುಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮದ್‌ ಖುರೇಷಿಮನವಿ ಮಾಡಿದ್ದರು.

‘ಸದ್ಯದ ಒತ್ತಡವನ್ನು ಕಡಿಮೆ ಮಾಡಲು ಉಭಯ ರಾಷ್ಟ್ರಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಅರ್ಥಪೂರ್ಣ ಮಾತುಕತೆ, ಪರಸ್ಪರ ಒಪ್ಪಂದದ ಮೂಲಕ ಪ್ರಾದೇಶಿಕ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಗಳನ್ನು ನಿರ್ವಹಿಸಬೇಕು’ ಎಂದುವಿಶ್ವಸಂಸ್ಥೆ ವಕ್ತಾರಸ್ಟೀಫನ್ ಡುವಾರಿಕ್ ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.