ADVERTISEMENT

ಪಾಕಿಸ್ತಾನ ಪ್ರಜೆಗಳಿಗೆ ವೀಸಾ ಪ್ರಕ್ರಿಯೆ ಸರಳಗೊಳಿಸಿದ ಬಾಂಗ್ಲಾದೇಶ ಸರ್ಕಾರ

ಪಿಟಿಐ
Published 12 ಜನವರಿ 2025, 7:11 IST
Last Updated 12 ಜನವರಿ 2025, 7:11 IST
<div class="paragraphs"><p>ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಧ್ವಜ</p></div>

ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಧ್ವಜ

   

ಐಸ್ಟಾಕ್ ಚಿತ್ರ

ಲಾಹೋರ್‌: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು, ಪಾಕಿಸ್ತಾನದೊಂದಿಗೆ ವಾಣಿಜ್ಯ ಮತ್ತು ಆರ್ಥಿಕ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಪಾಕ್‌ ಜನರಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

ADVERTISEMENT

ಬಾಂಗ್ಲಾದಲ್ಲಿ ಹಿಂದೂಗಳು ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ದಾಳಿಯಿಂದಾಗಿ ಭಾರತದೊಂದಿಗಿನ ಸಂಬಂಧ ಹಳಸಿರುವ ಹೊತ್ತಿನಲ್ಲಿ ಈ ಕ್ರಮ ಕೈಗೊಂಡಿದೆ.

ವೀಸಾ ಅನುಮೋದಿಸಲು ಪಾಕ್‌ ರಾಯಭಾರ ಕಚೇರಿಗೆ ಢಾಕಾ ಅನುಮತಿ ನೀಡುವ ಅಗತ್ಯವಿತ್ತು. ಅದನ್ನು ಈಗ ಬಾಂಗ್ಲಾ ಸರ್ಕಾರ ತೆಗೆದುಹಾಕಿದೆ ಎಂದು ಪಾಕಿಸ್ತಾನದಲ್ಲಿ ಬಾಂಗ್ಲಾದೇಶದ ಹೈಕಮಿಷನರ್‌ ಆಗಿರುವ ಇಕ್ಬಾಲ್‌ ಹುಸೇನ್‌ ತಿಳಿಸಿದ್ದಾರೆ. ಲಾಹೋರ್‌ನಲ್ಲಿ ಶನಿವಾರ ನಡೆದ ವಾಣಿಜ್ಯ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

'ಹೂಡಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಎರಡೂ ರಾಷ್ಟ್ರಗಳು ಆದ್ಯತೆ ನೀಡಬೇಕು' ಎಂದು ಹುಸೇನ್‌ ಹೇಳಿರುವುದಾಗಿ 'ಡಾನ್‌' ನ್ಯೂಸ್‌ ವರದಿ ಮಾಡಿದೆ.

'ಉಭಯ ದೇಶಗಳ ನಡುವಣ ಸಂಬಂಧವು ದಶಕಗಳಿಂದ ತೃಪ್ತಿಕರವಾಗಿಲ್ಲ' ಎಂಬುದನ್ನು ಒತ್ತಿ ಹೇಳಿರುವ ಅವರು, ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ನೇತೃತ್ವದ ಬಾಂಗ್ಲಾ ಮಧ್ಯಂತರ ಸರ್ಕಾರವು ಪಾಕ್‌ ಜೊತೆಗಿನ ಬಾಂಧವ್ಯವನ್ನು ಉತ್ತಮಪಡಿಸಲು ಉತ್ಸುಕವಾಗಿದೆ ಎಂದೂ ಹೇಳಿದ್ದಾರೆ.

'ಬಾಂಗ್ಲಾದೇಶವು, 18 ಕೋಟಿ ಜನಸಂಖ್ಯೆ ಹೊಂದಿದ್ದು, ಪ್ರಮುಖ ಗ್ರಾಹಕ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ. ಇದರ ಲಾಭ ಪಡೆಯುವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ' ಎಂದಿದ್ದಾರೆ.

ಪ್ರಾದೇಶಿಕ ಸಹಕಾರಕ್ಕಾಗಿ ಯೂನಸ್‌ ಅವರು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆಯೂ ಪ್ರಸ್ತಾಪಿಸಿದ ಹುಸೇನ್‌, ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರಕ್ಕೂ ಕರೆ ನೀಡಿದ್ದಾರೆ.

ಪ್ರಾದೇಶಿಕ ವ್ಯಾಪಾರ ಮತ್ತು ಸಹಕಾರವನ್ನು ಸುಧಾರಿಸಲು ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘಟನೆ (ಎಸ್‌ಎಎಆರ್‌ಸಿ – ಸಾರ್ಕ್) ಅನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.