ADVERTISEMENT

ರಷ್ಯಾ ಕಂಡರೆ ಭಯವೇ?: ಪಾಶ್ಚಾತ್ಯ ರಾಷ್ಟ್ರಗಳಿಗೆ ಝೆಲೆನ್‌ಸ್ಕಿ ಪ್ರಶ್ನೆ

ರಾಯಿಟರ್ಸ್
Published 27 ಮಾರ್ಚ್ 2022, 3:43 IST
Last Updated 27 ಮಾರ್ಚ್ 2022, 3:43 IST
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್ (ಉಕ್ರೇನ್):ತಮ್ಮ ಸಂಗ್ರಹಣೆಯಲ್ಲಿರುವ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮನವಿ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾ ಬಗ್ಗೆ ಭಯವಿದೆಯೇ ಎಂದೂ ಪ್ರಶ್ನಿಸಿದ್ದಾರೆ.

ಶನಿವಾರ ತಡರಾತ್ರಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಝೆಲೆನ್‌ಸ್ಕಿ,ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಹಲವು ರಾಷ್ಟ್ರಗಳು ಭರವಸೆ ನೀಡಿವೆ. ಆದರೆ, ಉಕ್ರೇನ್‌ಗೆ ಯುದ್ಧ ಟ್ಯಾಂಕರ್‌ಗಳು, ವಿಮಾನಗಳು ಮತ್ತು ಜಲಾಂತರ್ಗಾಮಿಗಳ ಅವಶ್ಯಕತೆ ಇದೆ ಎಂದಿದ್ದಾರೆ.‘ನಮ್ಮ ಪಾಲುದಾರ ರಾಷ್ಟ್ರಗಳು ಯಾವೆಲ್ಲ ಶಸ್ತ್ರಾಸ್ತ್ರಗಳನ್ನು ಹೊಂದಿವೆಯೋ, ಯಾವೆಲ್ಲ ಶಸ್ತ್ರಾಸ್ತ್ರಗಳು ಧೂಳು ಹಿಡಿಯುತ್ತಿವೆಯೋ ಅವು ಉಕ್ರೆನ್‌ಗಾಗಿ ಮಾತ್ರವಲ್ಲ, ಇಡೀ ಯುರೋಪಿನ ಸ್ವಾತಂತ್ರ್ಯಕ್ಕಾಗಿ ಅಗತ್ಯವಾಗಿವೆ' ಎಂದು ಮನವರಿಕೆ ಮಾಡಿದ್ದಾರೆ.

ಮುಂದುವರಿದು, ನ್ಯಾಟೊ ಹೊಂದಿರುವ ಶೇ 1 ರಷ್ಟು ಯುದ್ಧ ವಿಮಾನಗಳು ಮತ್ತು ಶೇ 1 ರಷ್ಟು ಟ್ಯಾಂಕ್‌ಗಳು ಉಕ್ರೇನ್‌ಗೆ ಬೇಕಾಗಿವೆ. ನಾವು ಅದಕ್ಕಿಂತ ಹೆಚ್ಚೇನೂ ಕೇಳುತ್ತಿಲ್ಲ ಎಂದು ಹೇಳಿದ್ದಾರೆ. 'ನಾವು ಈಗಾಗಲೇ 31 ದಿನಗಳಿಂದಕಾಯುತ್ತಿದ್ದೇವೆ. ಯೂರೋ–ಅಟ್ಲಾಂಟಿಕ್ ಸಮುದಾಯದ ಉಸ್ತುವಾರಿ ಯಾರು? ಇತರರಿಗೆ ಬೆದರಿಕೆಯೊಡ್ಡುತ್ತಾ ಈಗಲೂ ರಷ್ಯಾವೇ ಉಸ್ತುವಾರಿಯಾಗಿ ಮುಂದುವರಿದಿದೆಯೇ?' ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಯುದ್ಧದಲ್ಲಿ ಉಕ್ರೇನ್‌ ಸೋಲು ಕಂಡರೆ, ಯುರೋಪ್‌ನಲ್ಲಿ ಆಕ್ರಮಣ ನಡೆಸುವುದನ್ನುರಷ್ಯಾ ಮುಂದುವರಿಸಲಿದೆ ಎಂದು ಪದೇಪದೆ ಎಚ್ಚರಿಸಿರುವ ಝೆಲೆನ್‌ಸ್ಕಿ,ಉಕ್ರೇನ್ ವಾಯುಪ್ರದೇಶದಲ್ಲಿ ‘ನೋ ಫ್ಲೈ ಜೋನ್‌’ (ಹಾರಾಟ-ನಿಷೇಧ ವಲಯ) ರಚಿಸುವಂತೆ ತಾವು ಮಾಡಿರುವ ಮನವಿಯನ್ನು ನ್ಯಾಟೊ ಬೆಂಬಲಿಸುತ್ತಿಲ್ಲ. ಇದು ಯುದ್ಧಕ್ಕೆ ಪ್ರಚೋದನೆ ನೀಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, ಪೋಲೆಂಡ್‌ ಅಧ್ಯಕ್ಷಆ್ಯಂಡ್ರೆಜ್ ದುಡಾ ಅವರೊಂದಿಗೆ ಮಾತನಾಡಿರುವ ಅವರು, ಪೂರ್ವ ಯುರೋಪ್‌ನಲ್ಲಿರುವ ರಷ್ಯಾ ನಿರ್ಮಿತ ಯುದ್ಧ ವಿಮಾನಗಳನ್ನು ಇನ್ನೂ ಉಕ್ರೇನ್‌ಗೆ ರವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.