ADVERTISEMENT

Russia-Ukraine Conflict: ಉಕ್ರೇನ್–ರಷ್ಯಾ ಸೇನಾ ಸಾಮರ್ಥ್ಯ ಹೇಗಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2022, 10:57 IST
Last Updated 24 ಫೆಬ್ರುವರಿ 2022, 10:57 IST
ರಷ್ಯಾ ಸೇನೆಯ ಸೇನಾ ಸಿಬ್ಬಂದಿ– ಎಎಫ್‌ಪಿ ಚಿತ್ರ
ರಷ್ಯಾ ಸೇನೆಯ ಸೇನಾ ಸಿಬ್ಬಂದಿ– ಎಎಫ್‌ಪಿ ಚಿತ್ರ   

ಬೆಂಗಳೂರು: ತನ್ನ ಮಗ್ಗುಲಲ್ಲಿರುವ ಹಾಗೂಧಾನ್ಯ, ಸಸ್ಯ ಸಮೃದ್ಧಿಯ ಉಕ್ರೇನ್ ಮೇಲೆ ಹಿಡಿತ ಸಾಧಿಸಬೇಕು ಎಂದು ಪಣ ತೊಟ್ಟಿರುವ ರಷ್ಯಾ, ಅಂತೂ ಉಕ್ರೇನ್ ಮೇಲೆರಗಿದೆ. ಈ ವಿದ್ಯಮಾನ ಮೂರನೇ ಮಹಾಯುದ್ಧಕ್ಕೆ ಕಾರಣವಾಗಿಬಿಡಬಹುದೇ? ಎಂದು ಅನೇಕ ಜಾಗತಿಕ ನಾಯಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಮೇಲೆ ಗುರುವಾರ ಬೆಳಗಿನ ಜಾವ ಸುಮಾರು 1 ಲಕ್ಷ ರಷ್ಯಾ ಸೈನಿಕರುಉಕ್ರೇನ್ ಗಡಿಯನ್ನು ಮುತ್ತಿಗೆ ಹಾಕಿದ್ದಾರೆ. ಈಗಾಗಲೇ ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ (ಕೀವ್, ಕಾರ್‌ಕೀವ್) ಕ್ಷಿಪಣಿ ದಾಳಿಗಳನ್ನು ರಷ್ಯಾ ಮುಂದುವರೆಸಿದ್ದು, 9 ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ. ಹಲವಾರು ಸಾವು–ನೋವು, ಆಸ್ತಿ–ಪಾಸ್ತಿ ನಷ್ಟವಾಗಿದೆ.

ಈ ಎರಡೂ ದೇಶಗಳ ಸೇನಾ ಶಕ್ತಿಯನ್ನು ಹೋಲಿಸಿ ನೋಡುವುದಾದರೆ ರಷ್ಯಾ ಮತ್ತು ಉಕ್ರೇನ್ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಅದಾಗ್ಯೂ ಕೂಡ ರಷ್ಯಾವನ್ನು ಒಂದು ಕೈ ನೋಡೇ ಬಿಡೋಣ ಎಂದು ಉಕ್ರೇನ್ ಪ್ರತಿದಾಳಿ ನಡೆಸುತ್ತಿದೆ.

ರಷ್ಯಾದ ಎಲ್ಲ ಸೇನಾ ವಿಭಾಗದಲ್ಲಿ 8.50 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಇದ್ದರೇ, ಉಕ್ರೇನ್‌ ಕೇವಲ 2.50 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿಯನ್ನು ಹೊಂದಿದೆ.

ರಷ್ಯಾದಲ್ಲಿ 12,500 ಸೇನಾ ಟ್ಯಾಂಕ್‌ಗಳು ಇದ್ದರೇ, ಉಕ್ರೇನ್‌ ಕೇವಲ 2,600 ಸೇನಾ ಟ್ಯಾಂಕ್‌ಗಳನ್ನು ಹೊಂದಿದೆ.

30,000 ಕ್ಕೂ ಅಧಿಕ ಸಶಸ್ತ್ರ ವಾಹನಗಳನ್ನು ರಷ್ಯಾ ಹೊಂದಿದ್ದರೇ, ಉಕ್ರೇನ್ 12,000 ಸಶಸ್ತ್ರ ವಾಹನಗಳನ್ನು ಮಾತ್ರ ಹೊಂದಿದೆ.

ರಷ್ಯಾ ಬಳಿ 14,000 ಕ್ಕೂ ಅಧಿಕ ಫಿರಂಗಿಗಳಿದ್ದರೇ, ಉಕ್ರೇನ್ ಬಳಿ ಕೇವಲ 3,000 ಫಿರಂಗಿಗಳಿವೆ.

600ಕ್ಕೂ ಅಧಿಕ ಬೃಹತ್ ನೌಕಾ ವಾಹನಗಳನ್ನು ರಷ್ಯಾ ಹೊಂದಿದೆ. ಕೇವಲ 30 ಬೃಹತ್ ನೌಕಾ ವಾಹನಗಳನ್ನು ಉಕ್ರೇನ್ ಹೊಂದಿದೆ. 70 ಬೃಹತ್ಜಲಾಂತರ್ಗಾಮಿಗಳು ರಷ್ಯಾ ಬಳಿ ಇವೆ. ಆದರೆ, ಉಕ್ರೇನ್ ಬಳಿ ರಷ್ಯಾ ಹೊಂದಿರುವಂತಹ ಶಕ್ತಿಶಾಲಿ ಜಲಾಂತರ್ಗಾಮಿ ಒಂದೂ ಕೂಡ ಇಲ್ಲ.

ಇನ್ನು 4,100 ಯುದ್ಧ ವಿಮಾನಗಳು ರಷ್ಯಾ ಬಳಿ ಇವೆ. ಇದರಲ್ಲಿ 722 ಫೈಟರ್ ಜೆಟ್‌ಗಳಾಗಿವೆ. ಆದರೆ, 318 ಯುದ್ಧ ವಿಮಾನಗಳಲ್ಲಿ 69 ಪೈಟರ್ ಜಟ್‌ಗಳನ್ನು ಮಾತ್ರ ಉಕ್ರೇನ್ ಹೊಂದಿದೆ.

ಇನ್ನೊಂದು ವಿಶೇಷವೆಂದರೆ ರಷ್ಯಾ ವಾರ್ಷಿಕವಾಗಿ (2020 ರ ಮಾಹಿತಿ) 67.7 ಬಿಲಿಯನ್ ಯುಎಸ್ ಡಾಲರ್‌ ರಕ್ಷಣಾ ವಲಯಕ್ಕೆ ಖರ್ಚು ಮಾಡಿದರೆ ಉಕ್ರೇನ್ ಕೇವಲ 5.9 ಬಿಲಿಯನ್ ಯುಎಸ್ ಡಾಲರ್‌ ಖರ್ಚು ಮಾಡುತ್ತದೆ.

ಇನ್ನೊಂದೆಡೆ ಐರೋಪ್ಯ ಒಕ್ಕೂಟ ಉಕ್ರೇನ್ ಬೆನ್ನಿಗೆ ನಿಲ್ಲುವುದಾಗಿ ಘೋಷಿಸಿದೆ. ಆದರೆ, ರಷ್ಯಾದ ಸೇನಾ ಬಲದ ಮುಂದೆ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಸೇನಾ ಬಲವೂ ಕಡಿಮೆಯೇ ಎಂದು ತಜ್ಞರು ಹೇಳುತ್ತಾರೆ.

(ಆಧಾರ:Stockholm International Peace Research Institute (SIPRI)).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.