ಚಾರ್ಲಿ ಕಿರ್ಕ್
ಪ್ರೊವೊ: ‘ನನಗೆ ಚಾರ್ಲಿ ಕಿರ್ಕ್ ಅವರನ್ನು ಆಯ್ಕೆ (ಹತ್ಯೆ) ಮಾಡುವ ಅವಕಾಶ ಲಭಿಸಿದೆ. ಕೆಲವು ದ್ವೇಷಗಳನ್ನು ಮಾತುಕತೆಯಿಂದ ಬಗೆಹರಿಸಲು ಸಾಧ್ಯವಿಲ್ಲ’ ಎಂದು ಚೀಟಿಯೊಂದರಲ್ಲಿ ಬರೆದು, ಅದನ್ನು ಮನೆಯ ಕೀಬೋರ್ಡ್ ಕೆಳಗೆ ಇರಿಸಿ ಆರೋಪಿ ಟೈಲರ್ ರಾಬಿನ್‌ಸನ್ (22) ಮನೆಯಿಂದ ಹೊರಹೋಗಿದ್ದ.
ತನ್ನೊಂದಿಗೆ ಸಹ ಜೀವನ ನಡೆಸುತ್ತಿರುವ ಪ್ರಣಯ ಸಂಗಾತಿಗೆ ಈ ಚೀಟಿ ತೆರೆದು ನೋಡುವಂತೆ ಕೃತ್ಯದ ಬಳಿಕ ಸಂದೇಶ ಕಳುಹಿಸಿದ್ದ. ಸಂಗಾತಿ ಈ ಚೀಟಿ ತೆರೆದು ನೋಡಿ ಅಚ್ಚರಿಯಿಂದ, ‘ಗುಂಡಿಕ್ಕಿರುವುದು ನೀನೇನಾ?’ ಎಂದು ಕೇಳಿದಾಗ. ‘ಹೌದು ನಾನೇ, ಕ್ಷಮಿಸಿ’ ಎಂದು ತಪ್ಪೊಪ್ಪಿಕೊಂಡಿದ್ದ.
ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ.
ಸದ್ಯ ಟೈಲರ್ ರಾಬಿನ್‌ಸನ್ ಪೊಲೀಸರ ವಶದಲ್ಲಿದ್ದಾನೆ. ಮಂಗಳವಾರ ಆತ ಜೈಲಿನಿಂದಲೇ ವಿಡಿಯೊ ಕರೆ ಮೂಲಕ ವಿಚಾರಣೆ ಎದುರಿಸಿದ.
ಸೆ.10ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾರ್ಲಿ ಕಿರ್ಕ್ 3 ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಅದೇ ಕಟ್ಟಡದ ಚಾವಣಿ ಮೇಲಿನಿಂದ ರಾಬಿನ್‌ಸನ್ ಅವರತ್ತ ಗುಂಡು ಹಾರಿಸಿದ್ದ. ಚಾರ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಕೃತ್ಯದ ಬಳಿಕ ರಾಬಿನ್‌ಸನ್ ಸಂಗಾತಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ, ಸಂಗಾತಿ ಇದನ್ನು ಪೊಲೀಸರಿಗೆ ತಿಳಿಸಲಿಲ್ಲ. ಟಿವಿಯಲ್ಲಿ ರಾಬಿನ್‌ಸನ್ ಚಿತ್ರವನ್ನು ಗಮನಿಸಿದ ಆತನ ಪೋಷಕರು, ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಆರೋಪಿಯನ್ನು ಬಂಧಿಸಲಾಯಿತು.
ಚಾರ್ಲಿ ಕಿರ್ಕ್ ಅವರ ಲಿಂಗತ್ವ ಅಲ್ಪಸಂಖ್ಯಾತ ವಿರೋಧಿ ನಿಲುವುಗಳನ್ನು ರಾಬಿನ್‌ಸನ್ ತೀವ್ರವಾಗಿ ವಿರೋಧಿಸಿದ್ದ. ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.