ಮಾಸ್ಕೊ: ರಷ್ಯಾ ಅಧಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಾರು ಎಂದು ನಂಬಲಾದ ʼಔರಸ್ ಸೆನಾಟ್ ಲಿಮೋಸಿನ್ʼ ಕಾರು ಮಾಸ್ಕೊದಲ್ಲಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ಈ ಘಟನೆ ಮಾರ್ಚ್ 29 ರಂದು ಮಾಸ್ಕೊದ ಲುಬಿಯಾಂಕಾದಲ್ಲಿರುವ ಎಫ್‌ಎಸ್‌ಬಿ ಗುಪ್ತಚರ ಸೇವಾ ಇಲಾಖೆ ಪ್ರಧಾನ ಕಚೇರಿಯ ಉತ್ತರಕ್ಕಿರುವ ರಸ್ತೆಯಲ್ಲಿ ಶುಕ್ರವಾರ (ಮಾರ್ಚ್ 29 ರಂದು) ಈ ಘಟನೆ ನಡೆದಿದೆ ಎಂದು ʼಯುರೋವೀಕ್ಲಿʼ ಪತ್ರಿಕೆ ವರದಿ ಮಾಡಿದೆ.
ಕಾರು ಹೊತ್ತಿ ಉರಿಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪುಟಿನ್ ಅವರನ್ನು ಹತ್ಯೆ ಮಾಡಲು ಈ ಕೃತ್ಯವೆಸಗಲಾಗಿದೆ ಎಂದು ಹೇಳಲಾಗುತ್ತಿದೆ.
ಮೊದಲು, ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕಾರಿಗೆ ವ್ಯಾಪಿಸಿರುವುದು ವಿಡಿಯೊಗಳಿಂದ ತಿಳಿದು ಬಂದಿದೆ ಎಂದು ʼದಿ ಸನ್ʼ ವರದಿ ಮಾಡಿದೆ.
ಪುಟಿನ್ ಅವರು ತಮ್ಮ ಬಳಕೆ ಹಾಗೂ ಗಣ್ಯರಿಗೆ ಉಡುಗೊರೆ ನೀಡಲು ರಷ್ಯಾ ನಿರ್ಮಿತ ಕಾರುಗಳನ್ನೇ ಬಳಸುತ್ತಾರೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರಿಗೂ ಅಂತಹದೇ ಒಂದು ಕಾರನ್ನು ನೀಡಿದ್ದಾರೆ ಎಂದು ಉಲ್ಲೇಖಿಸಿದೆ.
ರಷ್ಯಾ ಹಾಗೂ ಉಕ್ರೇನ್ ಸೇನೆಗಳು ಸಂಘರ್ಷ ನಡೆಸುತ್ತಿರುವ ಹೊತ್ತಿನಲ್ಲಿ, ನಡೆದಿರುವ ಈ ಘಟನೆಯು ಪುಟಿನ್ ಅವರ ಭದ್ರತೆಯ ಬಗ್ಗೆ ಕಳವಳವನ್ನುಂಟು ಮಾಡಿದೆ. ಆದರೆ, ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಹಾಗಾಗಿ, ಕಾರನ್ನು ಯಾರು ಬಳಸುತ್ತಿದ್ದರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕಾರಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದೂ ಸ್ಪಷ್ಟವಾಗಿಲ್ಲ.
ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಸ್ಥಳದಲ್ಲಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ವರದಿಯಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.