ADVERTISEMENT

ಅಮೆರಿಕದಲ್ಲಿ ಕೋವಿಡ್ ಲಸಿಕೆ ಪ್ರಯೋಗ ಪುನರಾರಂಭಿಸಿದ ಆಸ್ಟ್ರಾಜೆನೆಕಾ

ರಾಯಿಟರ್ಸ್
Published 24 ಅಕ್ಟೋಬರ್ 2020, 2:29 IST
Last Updated 24 ಅಕ್ಟೋಬರ್ 2020, 2:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಬ್ರಿಟಿಷ್‌ ಫಾರ್ಮಾ ಕಂಪನಿಯ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯ ಪ್ರಯೋಗವನ್ನು ಅಮೆರಿಕದಲ್ಲಿ ಪುನರಾರಂಭಿಸಲಾಗಿದೆ. ಜಾನ್ಸನ್ & ಜಾನ್ಸನ್ ಕೂಡ ಸೋಮವಾರದಿಂದ ಲಸಿಕೆ ಪ್ರಯೋಗ ಪುನರಾರಂಭಿಸಲು ಸಿದ್ಧತೆ ನಡೆಸಿದೆ. ಈ ಕುರಿತು ಉಭಯ ಕಂಪನಿಗಳೂ ಮಾಹಿತಿ ನೀಡಿವೆ.

ಲಸಿಕೆಯ ಪ್ರಯೋಗ ಪೂರ್ಣಗೊಂಡು ಅನುಮೋದನೆ ದೊರೆತಲ್ಲಿ ವಿತರಣೆಗೆ ಸಂಬಂಧಿಸಿ ಎರಡೂ ಕಂಪನಿಗಳು ಅಮೆರಿಕ ಮತ್ತು ಇತರ ಕೆಲವು ದೇಶಗಳಿಂದ ಒಪ್ಪಂದ ಮಾಡಿಕೊಂಡಿವೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ 10 ದಿನಗಳು ಬಾಕಿ ಇರುವಾಗಲೇ ಲಸಿಕೆ ಪ್ರಯೋಗ ಪುನರಾರಂಭಿಸಲಾಗಿದೆ. ಈ ಮಧ್ಯೆ, ಲಸಿಕೆಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ರಾಜಕೀಯ ಒತ್ತಡ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಲಸಿಕೆ ದೊರೆಯಲು ಆರಂಭವಾದರೆ ಅದನ್ನು ಹಾಕಿಸಿಕೊಳ್ಳಲು ಅಮೆರಿಕದ ಕಾಲುಭಾಗದಷ್ಟು ಮಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ADVERTISEMENT

‘ನೈತಿಕ ಮಾನದಂಡಗಳನ್ನು ಅನುಸರಿಸಿಕೊಂಡೇ ನಾವು ಪ್ರಕ್ರಿಯೆಗಳನ್ನು ಅನುಸರಿಸುತ್ತಿದ್ದೇವೆ. ಲಸಿಕೆಗೆ ಅನುಮೋದನೆ ನೀಡುವ ವಿಚಾರದಲ್ಲಿ ಎಫ್‌ಡಿಎ ಕಾರ್ಯವಿಧಾನಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬುದಾಗಿ ಪ್ರಯೋಗ ಪುನರಾರಂಭಗೊಂಡಿರುವ ಈ ಸಂದರ್ಭದಲ್ಲಿ ಖಚಿತಪಡಿಸುತ್ತಿದ್ದೇನೆ’ ಎಂದು ಲಸಿಕೆ ಅಭಿವೃದ್ಧಿ ಕಾರ್ಯಾಚರಣೆ ಮುಖ್ಯಸ್ಥ ಮ್ಯಾಥ್ಯೂ ಹೆಪ್‌ಬರ್ನ್ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಬೆನ್ನು ಹುರಿಯಲ್ಲಿ ಉರಿಯೂತ ಕಾಣಿಸಿಕೊಂಡಿತ್ತು. ಪರಿಣಾಮವಾಗಿ ಸೆಪ್ಟೆಂಬರ್ 6ರಂದು ಅಮೆರಿಕದಲ್ಲಿಯೂ ಪ್ರಯೋಗ ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.