ಪಾಕಿಸ್ತಾನ, ಅಮೆರಿಕ
(ಐಸ್ಟೋಕ್ ಚಿತ್ರ)
ಬಲೂಚಿಸ್ತಾನ: ಪಾಕಿಸ್ತಾನದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕ್‌ನಲ್ಲಿ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದ್ದೇವೆ ಎಂದು ಹೇಳಿದ್ದರು. ಅಮೆರಿಕ ಅಧ್ಯಕ್ಷರ ಈ ಹೇಳಿಕೆಗೆ ಬಲೂಚಿಸ್ತಾನದ ನಾಯಕ ಮೀರ್ ಯಾರ್ ಬಲೂಚ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ಈ ಪ್ರದೇಶದಲ್ಲಿ ಹೇರಳವಾದ ತೈಲ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಕುರಿತು ಪಾಕಿಸ್ತಾನದ ಮಿಲಿಟರಿ, ನಿಮ್ಮನ್ನು 'ದಾರಿ ತಪ್ಪಿಸಿದೆ'. ಈ ನಿಕ್ಷೇಪಗಳು ಬಲೂಚಿಸ್ತಾನಕ್ಕೆ ಸೇರಿದ್ದಾಗಿದೆ' ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಟ್ರಂಪ್‌ಗೆ ಪ್ರತಿಕ್ರಿಯೆ ನೀಡಿರುವ ಮೀರ್ ಯಾರ್ ಬಲೂಚ್, 'ಈ ಪ್ರದೇಶದಲ್ಲಿ ತೈಲ ಹಾಗೂ ಖನಿಜ ನಿಕ್ಷೇಪಗಳ ಗುರುತಿಸುವಿಕೆ ಸರಿಯಾಗಿದೆ. ಆದರೆ ಸಂಪನ್ಮೂಲಗಳ ನಿಖರವಾದ ಭೌಗೋಳಿಕ ಮತ್ತು ಮಾಲೀಕತ್ವದ ಕುರಿತು ಪಾಕಿಸ್ತಾನದ ಮಿಲಿಟರಿ ನಾಯಕತ್ವವು ವಿಶೇಷವಾಗಿ ಜನರಲ್ ಅಸೀಮ್ ಮುನೀರ್ ನಿಮ್ಮ ಆಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ' ಎಂದು ಹೇಳಿದ್ದಾರೆ.
'ಇಲ್ಲಿನ ತೈಲ, ನೈಸರ್ಗಿಕ ಅನಿಲ, ತಾಮ್ರ, ಲಿಥಿಯಂ, ಯುರೇನಿಯಂ ಮತ್ತು ಅಪರೂಪದ ಖನಿಜ ನಿಕ್ಷೇಪಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದೊಳಗೆ ಇಲ್ಲ. ಅವುಗಳು ಬಲೂಚಿಸ್ತಾನ ಗಣರಾಜ್ಯಕ್ಕೆ ಸೇರಿದ್ದಾಗಿದೆ. ಬಲೂಚಿಸ್ತಾನ ಸಾರ್ವಭೌಮ ರಾಷ್ಟ್ರವಾಗಿದ್ದು, ಈಗ ಪಾಕಿಸ್ತಾನ ಅತಿಕ್ರಮಣ ಮಾಡಿಕೊಂಡಿದೆ. ಬಲೂಚಿಸ್ತಾನದ ಸಂಪತ್ತನ್ನು ದೋಚಲು ಉದ್ದೇಶಪೂರ್ವಕವಾಗಿ ಈ ಸುಳ್ಳು ಮಾಹಿತಿ ನೀಡಲಾಗಿದೆ' ಎಂದು ಅವರು ಹೇಳಿದ್ದಾರೆ.
'ಪಾಕಿಸ್ತಾನಕ್ಕೆ ನೆರವು ನೀಡುವ ಮೂಲಕ ಪಾಕ್‌ನ ಐಎಸ್‌ಐ ಆರ್ಥಿಕತೆ ವೃದ್ಧಿಸಲಿದ್ದು, ಅಫಘಾನಿಸ್ತಾನದಲ್ಲಿ ಸಾವಿರಾರು ಅಮೆರಿಕದ ಯೋಧರ ಸಾವಿಗೆ ಕಾರಣರಾದ ಅಲ್-ಖೈದಾ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಲು ಮತ್ತು ಭಯೋತ್ಪಾದಕ ಜಾಲ ಹೆಚ್ಚಿಸಲು ನೆರವಾಗಲಿದೆ. ಇದರಿಂದ 9/11ರ ದಾಳಿಗೆ ಸಮಾನವಾಗಿ ಮತ್ತಷ್ಟು ಭಯೋತ್ಪಾದನೆ ಚಟುವಟಿಕೆ ನಡೆಸಲು ಪಾಕ್‌ಗೆ ನೆರವಾಗಲಿದೆ' ಎಂದು ಅವರು ಎಚ್ಚರಿಸಿದ್ದಾರೆ.
'ಬಲೂಚಿಸ್ತಾನದಿಂದ ದೋಚುವ ಸಂಪನ್ಮೂಲದ ಪ್ರಯೋಜನವು ಪಾಕಿಸ್ತಾನದ ಜನರಿಗೆ ಸಿಗುವುದಿಲ್ಲ. ಅವುಗಳನ್ನು ಭಾರತ ವಿರೋಧಿ, ಇಸ್ರೇಲ್ ವಿರೋಧಿ ಮತ್ತು ಜಿಹಾದಿ ಬಲಪಡಿಸಲು ಬಳಸಿಕೊಳ್ಳಲಿದೆ. ಇದರಿಂದ ದಕ್ಷಿಣ ಏಷ್ಯಾದಲ್ಲಿ ಮತ್ತಷ್ಟು ಅಸ್ಥಿರತೆ ಉಂಟಾಗಲಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ಬಲೂಚಿಸ್ತಾನದ ಮೇಲಿನ ದಬ್ಬಾಳಿಕೆಯನ್ನು ತಡೆಯುವುದು ಕೇವಲ ಬಲೂಚ್ ಜನರಿಗೆ ಮಾತ್ರವಲ್ಲದೆ ಜಾಗತಿಕ ಭದ್ರತೆಯ ವಿಷಯವೂ ಆಗಿದೆ. ಬಲೂಚಿಸ್ತಾನ ಮಾರಾಟಕ್ಕಿಲ್ಲ ಎಂಬುದರಲ್ಲಿ ಸಂಶಯವೇ ಇಲ್ಲ. ಬಲೂಚ್ ಜನರ ಒಪ್ಪಿಗೆಯಿಲ್ಲದೆ ಪಾಕಿಸ್ತಾನ, ಚೀನಾ ಅಥವಾ ಜಗತ್ತಿನ ಯಾವುದೇ ವಿದೇಶಿ ಶಕ್ತಿಗಳು ನಮ್ಮ ಭೂಮಿ ಅಥವಾ ಸಂಪನ್ಮೂಲಗಳ ಬಳಕೆ ಮಾಡಲು ಬಿಡುವುದಿಲ್ಲ. ನಮ್ಮ ಸಾರ್ವಭೌಮತ್ವ ಕಾಪಾಡಲು ಹಾಗೂ ಸ್ವಾತಂತ್ರ್ಯಕ್ಕಾಗಿನ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಈ ನಿಜಾಂಶಗಳನ್ನು ಒಪ್ಪಿಕೊಂಡು ಬಲೂಚ್ ಜನರ ನ್ಯಾಯಬದ್ಧ ಆಕಾಂಕ್ಷೆಗಳನ್ನು ಬೆಂಬಲಿಸುವಂತೆ ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಮನವಿ ಮಾಡುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.