ಬಾಂಗ್ಲಾದೇಶದಲ್ಲಿ ವಾಯುಪಡೆ ವಿಮಾನವೊಂದು ಶಾಲೆಯ ಕಟ್ಟಡಕ್ಕೆ ಅಪ್ಪಳಿಸಿರುವ ದೃಶ್ಯ
–ರಾಯಿಟರ್ಸ್ ಚಿತ್ರ
ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನ ಸೋಮವಾರ ಮಧ್ಯಾಹ್ನ ಇಲ್ಲಿನ ಶಾಲಾ ಕಟ್ಟಡದ ಮೇಲೆ ಪತನಗೊಂಡಿದ್ದು, ಪೈಲಟ್ ಸೇರಿ 20 ಜನರು ಮೃತಪಟ್ಟಿದ್ದಾರೆ. ದುರಂತದಲ್ಲಿ 171 ಜನರು ಗಾಯಗೊಂಡಿದ್ದಾರೆ.
ಮೃತರಲ್ಲಿ ಬಹುತೇಕರು ಶಾಲಾ ಮಕ್ಕಳಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಾಹ 1:06ಕ್ಕೆ ಟೇಕ್‌ಆಫ್ ಆದ ಎಫ್–7 ಬಿಜಿಐ ತರಬೇತಿ ವಿಮಾನವು, ಢಾಕಾ ಸಮೀಪದ ಉತ್ತರಾ ಪ್ರದೇಶದಲ್ಲಿನ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜು ಆವರಣದಲ್ಲಿನ ಎರಡು ಮಹಡಿಯ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ವಿಮಾನವು 3 ಮತ್ತು 4ನೇ ತರಗತಿ ಕಟ್ಟಡಗಳ ಸಮೀಪ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತ ಸಂಭವಿಸಿದ ಕೂಡಲೇ ಭಾರಿ ಶಬ್ದದೊಂದಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತು. ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ವಾಯುಪಡೆಯ ಹೆಲಿಕಾಪ್ಟರ್ ಸಹ ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ದುರಂತದಲ್ಲಿ ಗಾಯಗೊಂಡವರನ್ನು ಸೇನಾ ಆಸ್ಪತ್ರೆ ಸೇರಿದಂತೆ ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತನಿಖೆಗೆ ಆದೇಶ:
ದೇಶ ಕಂಡ ಭೀಕರ ವಿಮಾನ ದುರಂತ ಇದಾಗಿದ್ದು, ಯಾಂತ್ರಿಕ ಕಾರಣದಿಂದ ಇದು ಸಂಭವಿಸಿದಂತಿದೆ. ದುರಂತಕ್ಕೆ ಕಾರಣ ತಿಳಿದುಕೊಳ್ಳಲು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದೆ ಎಂದು ಬಾಂಗ್ಲಾದೇಶ ವಾಯುಪಡೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.