ಶೇಖ್ ಹಸೀನಾ
ಢಾಕಾ: ‘ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣಗಳ ಆರೋಪ ಎದುರಿಸುತ್ತಿರುವ, ಬಾಂಗ್ಲಾ ದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಇದೇ ನವೆಂಬರ್ 13ರಂದು ತೀರ್ಪು ಪ್ರಕಟಗೊಳ್ಳಲಿದೆ’ ಎಂದು ಅಟಾರ್ನಿ ಜನರಲ್ ಗುರುವಾರ ತಿಳಿಸಿದ್ದಾರೆ.
ಈ ಪ್ರಕರಣ ವಿಚಾರಣೆಯೂ ಗುರುವಾರ ಮುಕ್ತಾಯವಾಗಿದೆ. ಐದು ತಿಂಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಮುಕ್ತಾಯದ ಭಾಷಣದಲ್ಲಿ ಮಾತನಾಡಿದ ಅಟಾರ್ನಿ ಜನರಲ್ ಎಂ.ಡಿ.ಅಸಾದ್‌ಜ್ಜಾಮನ್ ‘ಅವರು ದೇಶದ ನ್ಯಾಯವ್ಯವಸ್ಥೆಯ ಮೇಲೆ ನಂಬಿಕೆ ಹೊಂದಿದ್ದರೆ, ಹಸೀನಾ ದೇಶಕ್ಕೆ ಮರಳಬೇಕು’ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ದಂಗೆಯನ್ನು ಹತ್ತಿಕ್ಕಲು ಮಾರಣಾಂತಿಕ ದಾಳಿ ನಡೆಸಿದ ಆರೋಪಕ್ಕೆ ಹಸೀನಾ (78) ಗುರಿಯಾಗಿದ್ದಾರೆ.
ಅವರ ವಿಚಾರಣೆಯನ್ನು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಲಯವು (ಐಸಿಟಿ) ಭಾನುವಾರ ಆರಂಭಿಸಿತು. ಹಸೀನಾ ಅವರ ಆಪ್ತರಾದ, ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಾಲ್‌ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾಅಲ್ ಮಾಮೂನ್ ಈ ಪ್ರಕರಣದಲ್ಲಿ ಸಹಆರೋಪಿಗಳಾಗಿದ್ದಾರೆ. ಶೇಖ್ ಹಸೀನಾ ಹಾಗೂ ಕಮಾಲ್ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಯಿತು. ಮಾಮೂನ್ ಅವರು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ಮಾಫಿ ಸಾಕ್ಷಿಯಾಗಲು ಒಪ್ಪಿದ್ದಾರೆ.
ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ನೇಮಿಸಿರುವ ಮುಖ್ಯ ಪ್ರಾಸಿಕ್ಯೂಟರ್ ತಜುಲ್ ಇಸ್ಲಾಂ ವಾದ ಮಂಡಿಸಿದರು. ‘ಕಳೆದ ವರ್ಷ ದೇಶದಲ್ಲಿ ನಡೆದ ಹಿಂಸಾಚಾರ ಹಾಗೂ ಅಪರಾಧಿಕ ಕೃತ್ಯಗಳಿಗೆ ಶೇಖ್ ಹಸೀನಾ ಅವರೇ ನೇರ ಕಾರಣ. ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು’ ಎಂದು ತಜುಲ್ ಇಸ್ಲಾಂ, ನ್ಯಾಯಾಲಯಕ್ಕೆ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.