ಬಾಂಗ್ಲಾದೇಶ ಧ್ವಜ
– ಪಿಟಿಐ ಚಿತ್ರ
ಢಾಕಾ: ಬಾಂಗ್ಲಾದೇಶ ಚುನಾವಣಾ ಆಯೋಗವು 'ಜಮಾತ್–ಇ–ಇಸ್ಲಾಮಿ' ಪಕ್ಷದ ನೋಂದಣಿ ಹಾಗೂ ಚಿಹ್ನೆಯನ್ನು ಪುನಃಸ್ಥಾಪಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಚುನಾವಣಾ ಆಯೋಗದ ಹಿರಿಯ ಕಾರ್ಯದರ್ಶಿ ಅಖ್ತರ್ ಅಹ್ಮದ್ ಅವರ ಸಹಿಯುಳ್ಳ ಗೆಜೆಟ್ ಅಧಿಸೂಚನೆಯಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು 'ಬಾಂಗ್ಲಾದೇಶ ಸಂಗ್‌ಬಾದ್ ಸಂಗ್‌ಸ್ಥಾ' ವರದಿ ಮಾಡಿದೆ. ಇದರೊಂದಿಗೆ, ಈ ಪಕ್ಷವು ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವ ಹಾದಿ ಸುಗಮವಾಗಿದೆ.
'ಜಮಾತ್–ಇ–ಇಸ್ಲಾಮಿ' ಮೇಲಿನ ನಿಷೇಧವನ್ನು ಮಧ್ಯಂತರ ಸರ್ಕಾರವು ಎಂಟು ತಿಂಗಳ ಹಿಂದೆ ತೆಗೆದುಹಾಕಿತ್ತು. ಈ ಪಕ್ಷದ ನೋಂದಣಿಯನ್ನು ಚುನಾವಣಾ ಆಯೋಗವು ಮರುಸ್ಥಾಪಿಸಬೇಕು ಎಂದು ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಜೂನ್ 1ರಂದು ಆದೇಶಿಸಿತ್ತು.
ಬಾಂಗ್ಲಾದೇಶವು 1971ರಲ್ಲಿ ಪಾಕಿಸ್ತಾನದಿಂದ ಸ್ವತಂತ್ರಗೊಂಡಿದ್ದನ್ನು ವಿರೋಧಿಸಿದ್ದ ಜಮಾತ್ ಪಕ್ಷದ ನೋಂದಣಿಯನ್ನು ಢಾಕಾ ಹೈಕೋರ್ಟ್ (2018ರ ಡಿಸೆಂಬರ್) ಆದೇಶದ ಅನುಸಾರ ಚುನಾವಣಾ ಆಯೋಗವು ರದ್ದು ಮಾಡಿತ್ತು.
'ಜಮಾತ್' ರಾಷ್ಟ್ರೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹ ಎಂದಿದ್ದ ಸುಪ್ರೀಂ ಕೋರ್ಟ್, 2013ರಲ್ಲಿ ನೊಂದಣಿಯನ್ನು ರದ್ದು ಮಾಡಿತ್ತು.
ದೇಶದಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು 2024ರ ಆಗಸ್ಟ್ 5ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದಿದ್ದರು. ಆದರೆ, ಅದಕ್ಕಿಂತ ಕೆಲವು ದಿನಗಳ ಮೊದಲು, 'ಜಮಾತ್–ಇ–ಇಸ್ಲಾಮಿ' ಪಕ್ಷದ ಮೇಲೆ ಸಂಪೂರ್ಣ ನಿಷೇಧ ಹೇರಿದ್ದರು.
ಹಸೀನಾ ಪದಚ್ಯುತಿ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಜಮಾತ್, 2013ರ ಆದೇಶವನ್ನು ಪರಿಶೀಲಿಸುವಂತೆ ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.