
ಢಾಕಾ: 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ನಡೆಯಿತು.
ಕೆಲವೊಂದು ಸಣ್ಣ ಅಹಿತಕರ ಘಟನೆಗಳು ಹೊರತುಪಡಿಸಿದರೆ, ಮತದಾನ ಬಹುತೇಕ ಶಾಂತಿಯುತವಾಗಿತ್ತು. ಸಂಜೆ 4.30ಕ್ಕೆ ಮತದಾನ ಪೂರ್ಣಗೊಂಡ ಬೆನ್ನಲ್ಲೇ, ಮತ ಎಣಿಕೆಗೆ ಚಾಲನೆ ನೀಡಲಾಯಿತು. ಶುಕ್ರವಾರ ಬೆಳಿಗ್ಗೆ ಅಧಿಕೃತ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಒಟ್ಟು 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಿಗೆ ಗುರುವಾರ ಬೆಳಿಗ್ಗೆ 7.30ರಿಂದ ಬಿಗಿ ಭದ್ರತೆಯಲ್ಲಿ ಮತದಾನ ನಡೆಯಿತು. ಭದ್ರತೆಗೆ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿತ್ತು. ಮತದಾನದ ಸಮಯ ಮುಗಿದರೂ, ಕೆಲವು ಕಡೆ ಮತದಾನ ಕೇಂದ್ರದಲ್ಲಿ ಜನರು ಹಕ್ಕು ಚಲಾಯಿಸಲು ಸರತಿಯಲ್ಲಿ ನಿಂತಿದ್ದರು.
ಶೇರ್‌ಪುರ್-3 ಕ್ಷೇತ್ರದ ಅಭ್ಯರ್ಥಿಯೊಬ್ಬರು ಮೃತಪಟ್ಟಿರುವ ಕಾರಣ ಅಲ್ಲಿನ ಮತದಾನ ಮುಂದೂಡಲಾಗಿದೆ.
ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರು ಅವಾಮಿ ಲೀಗ್ ಪಕ್ಷವನ್ನು ವಿಸರ್ಜಿಸಿ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಜಮಾತ್–ಎ–ಇಸ್ಲಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಶೇ 48ರಷ್ಟು ಮತದಾನ
ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ದೇಶದಾದ್ಯಂತ ಶೇ 48ರಷ್ಟು ಮತದಾನ ದಾಖಲಾಗಿದೆ. 12.7 ಕೋಟಿ ಮತದಾರರು, 42,779 ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾಯಿಸಿದ್ದಾರೆ ಎಂದು ಬಾಂಗ್ಲಾದೇಶ ಚುನಾವಣಾ ಆಯೋಗದ ಕಾರ್ಯದರ್ಶಿ ಅಖ್ತರ್ ಅಹಮದ್ ತಿಳಿಸಿದ್ದಾರೆ.
ಗೋಪಾಲ್‌ಗಂಜ್‌ನ ನಿಚುಪುರಾ ಮತಗಟ್ಟೆ ಸಮೀಪ ಕಚ್ಚಾ ಬಾಂಬ್ ದಾಳಿ ಸೇರಿದಂತೆ ದೇಶದ ಕೆಲವೆಡೆ ಸಣ್ಣ ಪುಟ್ಟ ಘರ್ಷಣೆಗಳು ವರದಿಯಾಗಿವೆ. ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.