
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ತೀವ್ರಗೊಂಡಿದ್ದು, ದುಷ್ಕರ್ಮಿಗಳ ಗುಂಪು ಹಿಂದೂಗಳಿಗೆ ಸೇರಿದ ಮನೆಯೊಂದಕ್ಕೆ ಬೆಂಕಿ ಹಚ್ಚಿರುವ ಸುದ್ದಿ ಹೊರಬಿದ್ದಿದೆ. ಈ ದುಷ್ಕೃತ್ಯದಲ್ಲಿ ಮನೆಯಲ್ಲಿದ್ದ ಸಾಕು ಪ್ರಾಣಿಗಳು ಮೃತಪಟ್ಟಿದ್ದು, ಮನೆಯ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿವೆ. ಅದೃಷ್ಟವಶಾತ್, ಕುಟುಂಬ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದೇ ಪ್ರದೇಶದಲ್ಲಿ ಹಿಂದೂಗಳನ್ನು ಬೆದರಿಸುವ ಬ್ಯಾನರ್ ಸಹ ಪತ್ತೆಯಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹಿಂದೂಗಳು ಇಸ್ಲಾಂ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕೂಡಲೇ ಅದನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.
ಚಟ್ಟೋಗ್ರಾಮ್‌ನಲ್ಲಿ ನೆಲೆಸಿರುವ ಜಯಂತಿ ಸಂಘ ಮತ್ತು ಬಾಬು ಶುಕುಶಿಲ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದ್ದಂತೆ ಕ್ಷಣಮಾತ್ರದಲ್ಲಿ ಮನೆಯ ಸುತ್ತಲಿನ ಕಾಂಪೌಂಡ್ ಹಾರಿದ ಕುಟುಂಬ ಸದಸ್ಯರು ಹೊರಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಆದರೂ, ಮನೆಯಲ್ಲಿದ್ದ ವಸ್ತುಗಳು ನಾಶವಾಗಿದ್ದು, ಸಾಕುಪ್ರಾಣಿಗಳು ಮೃತಪಟ್ಟಿವೆ.
‘ಈ ಪ್ರದೇಶದ ಹಿಂದೂಗಳಿಗೆ ಹೇಳುವುದೇನೆಂದರೆ, ನಿಮ್ಮ ಮೇಲೆ ನಾವು ನಿಗಾ ಇರಿಸಿದ್ದೇವೆ.ನೀವು ಇಸ್ಲಾಂ ಧರ್ಮದ ಮತ್ತು ಮುಸ್ಲಿಂ ಸಮುದಾಯ ವಿರುದ್ಧದ ಚಟುವಟಿಕೆಯ ಆರೋಪಿಗಳಾಗಿದ್ದೀರಿ. ನೀವು ಈ ಕೂಡಲೇ ನಿಮ್ಮ ಚಳವಳಿ, ಸಭೆ ಮತ್ತು ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಇಲ್ಲವಾದರೆ, ಗಂಭೀರ ಪರಿಣಾಮ ಎದುರಿಸುತ್ತೀರಿ’ ಎಂದು ಬ್ಯಾನರ್‌ನಲ್ಲಿ ಕೈಬರಹದಲ್ಲಿ ಬರೆಯಲಾಗಿದೆ.
ಈ ನಿರ್ದೇಶನಗಳನ್ನು ಪಾಲಿಸುವಲ್ಲಿ ಹಿಂದೂ ಸಮುದಾಯ ವಿಫಲವಾದರೆ, ನಿಮ್ಮ ಮನೆಗಳು, ಆಸ್ತಿ ಮತ್ತು ಉದ್ಯಮಗಳನ್ನು ನಾಶ ಮಾಡುತ್ತೇವೆ. ನಿಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಲಾಗಿದೆ.
ದೀಪು ಚಂದ್ರ ದಾಸ್ ಹತ್ಯೆ
ಮೈಮೆನ್ಸಿಂಗ್ ಜಿಲ್ಲೆಯಲ್ಲಿ ದೈವದೂಷಣೆಯ ಆರೋಪದ ಮೇಲೆ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ಗುಂಪೊಂದು ಹೊಡೆದು ಕೊಂದ ಕೆಲವು ದಿನಗಳ ನಂತರ ಹಿಂದೂಗಳ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಭಾಲುಕಾ ಉಪಜಿಲಾದ ದುಬಾಲಿಯಾ ಪಾರಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗಾರ್ಮೆಂಟ್ ನೌಕರ ದಾಸ್, ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು.
ಡಿಸೆಂಬರ್ 16ರ ರಾತ್ರಿ ದಾಸ್ ಅವರಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿದ್ದ ಕಾರ್ಖಾನೆ ಮಾಲೀಕರು, ಅವರನ್ನು ಕಾರ್ಖಾನೆಯಿಂದ ಹೊರಗೆ ತಳ್ಳಿದ್ದರು. ಬಳಿಕ, ಇಸ್ಲಾಮಿಗಳ ಗುಂಪು ದಾಸ್ ಅವರನ್ನು ಹೊಡೆದು ಕೊಂದು ಮೃತದೇಹವನ್ನು ನೇತು ಹಾಕಿ ಬೆಂಕಿ ಹಚ್ಚಿತ್ತು. ದಾಸ್ ಅವರ ಸಹೋದ್ಯೋಗಿಗಳೇ ಈ ಕ್ರೂರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆಂದು ವರದಿಯಾಗಿತ್ತು.
ಭಾರತ ವಿರೋಧಿ ಮತ್ತು ಹಸೀನಾ ವಿರೋಧಿ ಹೋರಾಟಗಾರ, ಯುವ ನಾಯಕ ಶರೀಫ್ ಒಸ್ಮಾನ್ ಹಾದಿ ಹತ್ಯೆ ಬಳಿಕ ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ದೀಪು ದಾಸ್ ಅವರ ಹತ್ಯೆಗೆ ಭಾರತದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಎದುರು ಪ್ರತಿಭಟನೆಗಳು ನಡೆಯುತ್ತಿವೆ. ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ನಂತರ, ಭಾರತ ಮತ್ತು ಬಾಂಗ್ಲಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.