
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಹೋದ್ಯೋಗಿಯೇ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ.
ಮೈಮೆನ್‌ಶಿಂಘೋದಲ್ಲಿ ಭಜೇಂದ್ರ ಬಿಸ್ವಾಸ್(40) ಎನ್ನುವವರನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇದೇ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪು ಚಂದ್ರದಾಸ್ ಎನ್ನುವವರನ್ನು ಇತ್ತೀಚೆಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಮೃತ ಮಂಡಲ್ ಎಂಬುವವರು ಹತ್ಯೆಗೀಡಾಗಿದ್ದರು. ಇದೀಗ ಮೂರನೇ ಪ್ರಕರಣ ದಾಖಲಾಗಿದೆ.
ಘಟನೆ ಸಂದರ್ಭದಲ್ಲಿ ಜವಳಿ ಕಾರ್ಖಾನೆಯ ಕಾರ್ಮಿಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಅದು ಹಿಂಸಾಚಾರಕ್ಕೆ ತಿರುಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದೊಡ್ಡ ಜನಸಮೂಹದ ಎದುರಲ್ಲೇ ನೋಮನ್ ಮಿಯಾನ್ ಎಂಬ ಯುವಕ, ಹಿಂದೂಗಳ ರಕ್ಷಣೆಗೆ ನಿಂತಿದ್ದ ಭಜೇಂದ್ರ ಬಿಸ್ವಾಸ್ ಮೇಲೆ ಬಂದೂಕನ್ನು ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ಗುಂಡು ಬಜೇಂದ್ರ ಅವರ ಎಡ ಭುಜಕ್ಕೆ ತಗುಲಿದೆ. ಆರೋಪಿಯನ್ನು ನೋಮನ್ ಮಿಯಾ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಜೇಂದ್ರ ಬಿಸ್ವಾಸ್ ಅವರು ಸುಲ್ತಾನಾ ಸ್ವೀಟರ್ಸ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ 6.30ರ ವೇಳೆಗೆ ಕೆಲಸ ಮಾಡುತ್ತಿದ್ದ ವೇಳೆ ಈ ಗುಂಡಿನ ದಾಳಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಭಜೇಂದ್ರ ಬಿಸ್ವಾಸ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ, ಗಂಭೀರ ಗಾಯಗೊಂಡಿದ್ದ ಭಜೇಂದ್ರ ಬಿಸ್ವಾಸ್ , ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಒಂದೇ ವಾರದಲ್ಲಿ ಮೂವರು ಹಿಂದೂ ವ್ಯಕ್ತಿಗಳ ಕೊಲೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.