ADVERTISEMENT

ಬಾಂಗ್ಲಾದೇಶದಲ್ಲಿರುವ ಭಾರತೀಯರನ್ನು ನಿಷೇಧಿಸಿ: ಇಂಕ್ವಿಲಾಬ್ ಮಂಚ್

ಹತ್ಯೆಗೀಡಾದ ವಿದ್ಯಾರ್ಥಿ ನಾಯಕ ಹಾದಿಯ ಪಕ್ಷದಿಂದ ಒತ್ತಾಯ

ಪಿಟಿಐ
Published 6 ಜನವರಿ 2026, 14:41 IST
Last Updated 6 ಜನವರಿ 2026, 14:41 IST
<div class="paragraphs"><p>ಬಾಂಗ್ಲಾದೇಶ ಧ್ವಜ</p></div>

ಬಾಂಗ್ಲಾದೇಶ ಧ್ವಜ

   

– ಪಿಟಿಐ ಚಿತ್ರ

ಢಾಕಾ/ನವದೆಹಲಿ: ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯರ ಉದ್ಯೋಗ ಪರವಾನಗಿಗಳನ್ನು ರದ್ದು ಮಾಡುವಂತೆ, ಹತ್ಯೆಗೊಳಗಾದ ವಿದ್ಯಾರ್ಥಿ ನಾಯಕ ಶರೀಫ್‌ ಉಸ್ಮಾನ್‌ ಹಾದಿಯವರ ಪಕ್ಷ ‘ಇಂಕ್ವಿಲಾಬ್ ಮಂಚ್’ ಮಂಗಳವಾರ ಢಾಕಾದಲ್ಲಿ ಆಗ್ರಹಿಸಿದೆ.

ADVERTISEMENT

ಒಂದು ದಿನವಿಡೀ ರ‍್ಯಾಲಿಯನ್ನು ಆಯೋಜಿಸಿದ್ದ ಪಕ್ಷವು, ಹಾದಿ ಹತ್ಯೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದೆ. ತನ್ನ ನಾಲ್ಕು ಅಂಶಗಳ ಬೇಡಿಕೆಗಳಲ್ಲಿ, ‘ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾದ ಹಾದಿ ಹಂತಕರನ್ನು ಬಾಂಗ್ಲಾದೇಶಕ್ಕೆ ಕಳುಹಿಸಿಕೊಡಬೇಕು’ ಎಂಬುದನ್ನೂ ಸೇರಿಸಿದೆ.

ಒಂದು ವೇಳೆ ಭಾರತ ಹಂತಕರನ್ನು ಹಸ್ತಾಂತರಿಸಲು ನಿರಾಕರಿಸಿದರೆ ಬಾಂಗ್ಲಾದೇಶವು ಅಂತರರಾಷ್ಟ್ರೀಯಯ ನ್ಯಾಯಾಲಯದ ಮೊರೆಹೋಗಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.

ಹಾದಿ ಅವರ ಹಂತಕರು ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಆರೋಪವನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.

ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾದ ದಂಗೆಯ ವೇಳೆ ಮುಂಚೂಣಿಗೆ ಬಂದಿದ್ದ ಹಾದಿ ಅವರ ಮೇಲೆ ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತಾದರೂ, ಡಿಸೆಂಬರ್ 18ರಂದು ಅವರು ನಿಧನರಾದರು.

ಅವರ ಹತ್ಯೆಯಲ್ಲಿ ಭಾರತದ ನಂಟಿದೆ ಮತ್ತು ಅವರ ಹಂತಕರು ಮೇಘಾಲಯದ ಮೂಲಕ ಭಾರತದ ಗಡಿ ದಾಟಿದ್ದಾರೆ ಎಂದು ಬಾಂಗ್ಲಾದೇಶ ಆರೋಪಿಸಿದೆ. ಫೆಬ್ರುವರಿ 12ರಂದು ನಡೆಯಲಿರುವ ಚುನಾವಣೆಗೆ ಹಾದಿ ಸಂಸದೀಯ ಅಭ್ಯರ್ಥಿಯೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.