ADVERTISEMENT

Bangladesh Unrest: ಈವರೆಗೆ 7 ಹಿಂದೂ ವ್ಯಕ್ತಿಗಳ ಹತ್ಯೆ; ಇಲ್ಲಿದೆ ವಿವರ

ಪಿಟಿಐ
Published 7 ಜನವರಿ 2026, 3:11 IST
Last Updated 7 ಜನವರಿ 2026, 3:11 IST
   

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದುವರಿದಿದ್ದು, ಈವರೆಗೆ ಏಳು ಹಿಂದೂ ವ್ಯಕ್ತಿಗಳ ಕೊಲೆಗೈಯಲಾಗಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶ ಹಿಂದೂ ಬುದ್ಧಿಸ್ಟ್‌ ಕ್ರಿಶ್ಚಿಯನ್‌ ಐಕ್ಯತಾ ಕೌನ್ಸಿಲ್‌ ಪ್ರಕಾರ, ಬಾಂಗ್ಲಾದೇಶದಲ್ಲಿ ಡಿಸೆಂಬರ್‌ನಲ್ಲಿ ಆರಂಭವಾದ ಹಿಂಸಾಚಾರದಲ್ಲಿ ಈವರೆಗೆ ಹಿಂದೂ ಧರ್ಮದ ಕನಿಷ್ಠ ಏಳು ಮಂದಿಯನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷಾಂತ್ಯದಲ್ಲಿ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿಯ ಹತ್ಯೆಯ ನಂತರ ನೆರೆ ರಾಷ್ಟ್ರದಲ್ಲಿ ಅಶಾಂತಿಯ ಘಟನೆ ನಡೆಯುತ್ತಲೇ ಇದೆ.

ಜ.5: ಮೋನಿ ಚಕ್ರವರ್ತಿ

ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯ ಪಲಾಶ್‌ ಉಪವಿಭಾಗದ ಚಾರ್‌ಸಿಂಧೂರ್‌ ಬಜಾರ್‌ನ ದಿನಸಿ ಅಂಗಡಿ ಮಾಲೀಕ, ಹಿಂದೂ ಧರ್ಮದ ಮೋನಿ ಚಕ್ರವರ್ತಿ (40) ಎಂಬವರ ಮೇಲೆ ಜ.5ರ ರಾತ್ರಿ 11 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿ, ಹತ್ಯೆ ಮಾಡಿದ್ದರು.

ಜ.5: ರಾಣಾ ಪ್ರತಾಪ್‌ ಬೈರಾಗಿ

ಬಾಂಗ್ಲಾದೇಶದ ಜೆಸ್ಸೋರ್‌ ಜಿಲ್ಲೆಯಲ್ಲಿ ಪತ್ರಿಕೆಯೊಂದರ ಹಂಗಾಮಿ ಸಂಪಾದಕರೂ ಆಗಿದ್ದ ಹಿಂದೂ ಉದ್ಯಮಿ ರಾಣಾ ಪ್ರತಾಪ್‌ ಬೈರಾಗಿ (38) ಎಂಬವರನ್ನು ದುಷ್ಕರ್ಮಿಗಳ ಗುಂಪು ಗುಂಡು ಹಾರಿಸಿ ಕೊಲೆಗೈದಿದ್ದರು. ಮಂಜುಗಡ್ಡೆ ತಯಾರಿಸುವ ಕಾರ್ಖಾನೆ ಹೊಂದಿದ್ದ ರಾಣಾ, ನರೈಲ್‌ನಿಂದ ಪ್ರಕಟವಾಗುವ 'ದೈನಿಕ್‌ ಬಿಡಿ ಖಬರ್‌' ಪತ್ರಿಕೆಯ ಹಂಗಾಮಿ ಸಂಪಾದಕರಾಗಿದ್ದರು.

ಡಿ.31: ಖೋಕನ್‌ ಚಂದ್ರ ದಾಸ್‌

ಔಷಧಿ ಅಂಗಡಿ ಹಾಗೂ ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಖೋಕನ್‌ ಚಂದ್ರ ದಾಸ್‌ (50) ಅವರ ಮೇಲೆ ಡಿ.31ರಂದು ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿ ಬೆಂಕಿ ಹಚ್ಚಿದ್ದರು. ಮೂರು ದಿನಗಳ ನಂತರ ಜ.3ರಂದು ಅವರು ಮೃತಪಟ್ಟಿದ್ದರು.

ಡಿ.24: ಅಮ್ರಿತ್ ಮೊಂಡಲ್

ರಾಜ್‌ಬರಿ ಪಟ್ಟಣದ ಪಂಗ್ಶಾ ಉಪಜಿಲ್ಲೆಯಲ್ಲಿ ಸುಲಿಗೆ ಆರೋಪದ ಮೇಲೆ ಅಮ್ರಿತ್ ಮೊಂಡಲ್ ಅವರನ್ನು ದುಷ್ಕರ್ಮಿಗಳು ಹಲ್ಲೆಗೈದು ಕೊಲೆ ಮಾಡಿದ್ದರು.

ಡಿ.18: ದೀಪು ಚಂದ್ರ ದಾಸ್‌

ಮೈಮೆನ್ಸಿಂಗ್ ನಗರದ ಬಲೂಕಾದಲ್ಲಿ ದೀಪು ಚಂದ್ರ ದಾಸ್‌ (25) ಎಂಬ ಹಿಂದೂ ವ್ಯಕ್ತಿಯನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು. ದಾಸ್ ಹತ್ಯೆ ಪ್ರಕರಣದಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ.

ಇನ್ನಿಬ್ಬರು ಹಿಂದೂ ವ್ಯಕ್ತಿಗಳ ಹತ್ಯೆ ಕುರಿತು ವಿವರ ಲಭ್ಯವಾಗಿಲ್ಲ. ಈ ಮಧ್ಯೆ ಜೆನೈದಾ ಜಿಲ್ಲೆಯ ಕಾಳಿಗಂಜ್ ಪಟ್ಟಣದಲ್ಲಿ ಹಿಂದೂ ವಿಧವೆ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯು ವರದಿಯಾಗಿತ್ತು.

2024ರ ಆಗಸ್ಟ್‌ನಲ್ಲಿ ಅಂದಿನ ಪ್ರಧಾನಿ ಶೇಖ್ ಹಸೀನಾ ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. 2022ರ ಜನಗಣತಿ ಪ್ರಕಾರ ಬಾಂಗ್ಲಾದೇಶದಲ್ಲಿ ಅಂದಾಜು 1.3 ಕೋಟಿ ಹಿಂದೂಗಳು ವಾಸಿಸುತ್ತಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇ 7.95ರಷ್ಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.