ADVERTISEMENT

ಸರ್ಕಾರದ ವಿರುದ್ಧ ಪ್ರತಿಭಟನೆ; ವರದಿ ಮಾಡಿದ ಪತ್ರಕರ್ತನ ಬಂಧಿಸಿದ ಚೀನಾ ಪೊಲೀಸ್

ರಾಯಿಟರ್ಸ್
Published 28 ನವೆಂಬರ್ 2022, 6:27 IST
Last Updated 28 ನವೆಂಬರ್ 2022, 6:27 IST
   

ಲಂಡನ್: ಶಾಂಘೈನಲ್ಲಿ ಭಾನುವಾರ ನಡೆಯುತ್ತಿದ್ದ ಪ್ರತಿಭಟನೆಯ ವರದಿಗಾರಿಕೆಯಲ್ಲಿ ನಿರತರಾಗಿದ್ದ ತನ್ನ ಪತ್ರಕರ್ತನ ಮೇಲೆ ಚೀನಾ ಪೊಲೀಸರು ಹಲ್ಲೆ ನಡೆಸಿ, ಬಂಧಿಸಿದ್ದಾರೆ ಎಂದು ಬಿಬಿಸಿ ಹೇಳಿದೆ.

ಈ ಸಂಬಂಧ ಬಿಬಿಸಿಯ ವಕ್ತಾರ ಹೇಳಿಕೆ ಬಿಡುಗಡೆ ಮಾಡಿದ್ದು, 'ಶಾಂಘೈ ಪ್ರತಿಭಟನೆ ವೇಳೆ ವರದಿ ಮಾಡುತ್ತಿದ್ದ ನಮ್ಮ ಪತ್ರಕರ್ತ ಎಡ್‌ ಲಾರೆನ್ಸ್‌ ಅವರಿಗೆ ಬೇಡಿ ತೊಡಿಸಿ ಬಂಧಿಸಲಾಯಿತು. ಅವರ ಚಿಕಿತ್ಸೆಯ ಬಗ್ಗೆ ಕಳವಳಗೊಂಡಿದ್ದೇವೆ. ಅವರನ್ನು ಕೆಲವು ಗಂಟೆಗಳ ಕಾಲ ವಶದಲ್ಲಿ ಇರಿಸಿಕೊಳ್ಳಲಾಗಿತ್ತು. ಬಂಧಿಸುವ ವೇಳೆ ಲಾರೆನ್ಸ್‌ ಅವರಿಗೆ ಪೊಲೀಸರು ಒದ್ದಿದ್ದಾರೆ. ಮಾನ್ಯತೆ ಹೊಂದಿರುವ ಪತ್ರಕರ್ತರಾಗಿ ಅವರು ಕೆಲಸ ಮಾಡುವ ವೇಳೆ ಇದು ನಡೆದಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿವೆ. ಹೀಗಾಗಿ ಅಲ್ಲಿನ ಸರ್ಕಾರ ಶಾಂಘೈ ಸೇರಿದಂತೆಹಲವು ನಗರಗಳಲ್ಲಿ ಕಠಿಣ ಲಾಕ್‌ಡೌನ್‌ ಹೇರಿದೆ. ಇದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ಪತ್ರಕರ್ತನ ಬಂಧನ ಸಂದರ್ಭದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಸಿ, 'ಜನಸಂದಣಿಯಿಂದ ಕೋವಿಡ್‌ ತಗುಲದಂತೆ ರಕ್ಷಿಸಲುಅವರನ್ನು ಬಂಧಿಸಲಾಯಿತು ಎಂದು ಪತ್ರಕರ್ತನನ್ನು ಬಿಡುಗಡೆ ಮಾಡಿದ ಅಧಿಕಾರಿ ಹೇಳಿದ್ದಾರೆ. ಅದನ್ನು ಹೊರತುಪಡಿಸಿ, ಚೀನಾದ ಆಡಳಿತದಿಂದ ಅಧಿಕೃತ ವಿವರಣೆಯಾಗಲೀ, ಕ್ಷಮಾಪಣೆಯಾಗಲಿ ಬಂದಿಲ್ಲ' ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.