ADVERTISEMENT

ಚಿಂಪಾಂಜಿಯೊಡನೆ ಸಂಬಂಧ: ಮೃಗಾಲಯಕ್ಕೆ ಬರದಂತೆ ಮಹಿಳೆಗೆ ನಿಷೇಧ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 11:26 IST
Last Updated 23 ಆಗಸ್ಟ್ 2021, 11:26 IST
ಚಿಂಪಾಂಂಜಿ, ಸಾಂದರ್ಭಿಕ ಚಿತ್ರ
ಚಿಂಪಾಂಂಜಿ, ಸಾಂದರ್ಭಿಕ ಚಿತ್ರ   

ಬ್ರೂಸೆಲ್ಸ್: ಮೃಗಾಲಯಗಳಿಗೆ ಪ್ರಾಣಿ ಪ್ರಿಯರು ಆಗಾಗ ಭೇಟಿ ನೀಡುತ್ತಾರೆ. ತಮ್ಮ ಇಷ್ಟದ ಪ್ರಾಣಿಗಳಿಗೆ ತಿನಿಸು ನೀಡಿ ಸಂಭ್ರಮಿಸುತ್ತಾರೆ. ಇನ್ನೂ ಕೆಲವರು ಅವುಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಇದರಿಂದ ಮೃಗಾಲಯಗಳಿಗೇ ಲಾಭವೇ ಜಾಸ್ತಿ ಇರುತ್ತದೆ.

ಆದರೆ, ಇಲ್ಲೊಬ್ಬ ಮಹಿಳೆಯನ್ನು ಮೃಗಾಲಯಕ್ಕೆ ಬರುವುದನ್ನು ಆ ಮೃಗಾಲಯವೇ ನಿಷೇಧಿಸಿದೆಯಂತೆ. ಅಲ್ಲದೇ ಇದಕ್ಕೆ ಕಾರಣವನ್ನೂ ನೀಡಿದ್ದು, ಇದರಿಂದ ಆ ಮಹಿಳೆ ತೀವ್ರ ಬೇಸರಗೊಂಡಿದ್ದಾರಂತೆ.

ಯುರೋಪ್ ದೇಶವಾದ ಬೆಲ್ಜಿಯಂನಲ್ಲಿ ಈ ಘಟನೆ ನಡೆದಿದೆ. ಉತ್ತರ ಬೆಲ್ಜಿಯಂನ ಆಂಟ್‌ವಾರ್ಪ್‌ ನಗರದ ಮೃಗಾಲಯಕ್ಕೆ ಕಳೆದ ನಾಲ್ಕು ವರ್ಷಗಳಿಂದ ‘ಆಡಿ ಟಿಮ್ಮರ್‌ಮ್ಯಾನ್ಸ್‌’ಎನ್ನುವ ಮಹಿಳೆ ಪ್ರತಿ ವಾರಕ್ಕೊಮ್ಮೆ ಭೇಟಿ ನೀಡಿ ಬರುತ್ತಿದ್ದರಂತೆ. ಈ ವೇಳೆ ಅವರಿಗೆ ಮೃಗಾಲಯದಲ್ಲಿನ ‘ಚಿತಾ‘ ಎನ್ನುವ 38 ವರ್ಷದ ಚಿಂಪಾಜಿಯೊಡನೆ ವಿಶೇಷ ಪ್ರೀತಿ ಬೆಳೆಯಿತಂತೆ.

ADVERTISEMENT

ಆ ಮಹಿಳೆ ಪ್ರತಿ ವಾರ ಬಂದು ಚಿತಾ ಚಿಂಪಾಂಜಿಯನ್ನು ಭೇಟಿಯಾಗಿ ಬಹಳ ಹೊತ್ತು ಕಾಲ ಕಳೆಯುತ್ತಿದ್ದರಂತೆ. ಇದರಿಂದ ಆ ಚಿಂಪಾಂಜಿ ಬೇರೆ ಚಿಂಪಾಂಜಿಗಳೊಡನೆ ಕಾಲ ಕಳೆಯುವುದನ್ನೇ ನಿಲ್ಲಿಸಿತಂತೆ. ಇದನ್ನು ಗಮನಿಸಿದ ಮೃಗಾಲಯದ ಅಧಿಕಾರಿಗಳು, ಮಹಿಳೆ ಚಿಂಪಾಂಜಿಯೊಡನೆ ಸಂಬಂಧ ಹೊಂದಿದ್ದಾರೆ. ಇದು ಸರಿಯಲ್ಲ. ಚಿಂಪಾಜಿ ಸಹಜ ಬೆಳವಣಿಗೆಗೆ ಇದು ಅಡ್ಡಿಯಾಗಲಿದೆ ಎಂದು ಕಡೆಗೆ, ‘ನೀನು ನಮ್ಮ ಜೂ ಕ್ಕೆ ಬರಬೇಡಮ್ಮ‘ ಎಂದು ಖಡಖ್‌ ಆಗಿ ಆದೇಶ ಮಾಡಿದೆ.

ಇದರಿಂದ ಬೇಸರಗೊಂಡಿರುವ ಆ ಮಹಿಳೆ, ‘ಮೃಗಾಲಯದ ನಿರ್ಧಾರದಿಂದ ನನಗೆ ಬೇಸರವಾಗಿದೆ. ಅವರು ಹೀಗೆಕೆ ಮಾಡಬೇಕು? ನಾನು ಮಾಡಿರುವ ತಪ್ಪಾದರೂ ಏನು? ನನಗೂ ಹಾಗೂ ಚಿತಾಗೂ ವಿಶೇಷ ಸಂಬಂಧವಿದೆ. ದಯವಿಟ್ಟು ನಮ್ಮನ್ನು ಅಗಲಿಸಬೇಡಿ‘ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.

(ಸುದ್ದಿ ಕೃಪೆ:wionews)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.