
ಭಾರತದೊಂದಿಗಿನ ಹೊಸ ವ್ಯಾಪಾರ ಒಪ್ಪಂದವನ್ನು ಶ್ವೇತಭವನ ಶ್ಲಾಘಿಸಿದ್ದು. ಭಾರತ ಇನ್ನುಮುಂದೆ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಅಮೆರಿಕದ ಪ್ರಮುಖ ವಲಯಗಳಲ್ಲಿ ಸುಮಾರು ₹41.50 ಲಕ್ಷ ಕೋಟಿ ($500 ಬಿಲಿಯನ್) ಹೂಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಶ್ವೇತಭವನ ಅಧಿಕೃತ ಹೇಳಿಕೆ ನೀಡಿದೆ.
ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
‘ನಮ್ಮ ಅಧ್ಯಕ್ಷರು ಭಾರತದೊಂದಿಗೆ ಮತ್ತೊಂದು ಉತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅವರು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ಮಾತನಾಡಿದ್ದು, ಉಭಯ ದೇಶಗಳು ಉತ್ತಮ ವ್ಯಾಪಾರ ಸಂಬಂಧದ ಕುರಿತು ಹಂಚಿಕೊಂಡಿದ್ದಾರೆ. ಭಾರತವು ಇನ್ನು ಮುಂದೆ ರಷ್ಯಾ, ವೆನುಜುವೆಲಾದಿಂದ ತೈಲವನ್ನು ಖರೀದಿಸುವುದಿಲ್ಲ. ಬದಲಿಗೆ ಅಮೆರಿಕದಿಂದ ತೈಲವನ್ನು ಖರೀದಿಸಲು ಬದ್ಧವಾಗಿದೆ. ಇದರಿಂದ ಅಮೆರಿಕ ಜನರಿಗೆ ಪ್ರಯೋಜನವಾಗಲಿದೆ’ ಎಂದರು.
ಇದಲ್ಲದೆ, ಪ್ರಧಾನಿ ಮೋದಿಯವರು ‘ಸಾರಿಗೆ, ಇಂಧನ ಮತ್ತು ಕೃಷಿ ಉತ್ಪನ್ನಗಳು ಸೇರಿದಂತೆ ಅಮೆರಿಕದ ಪ್ರಮುಖ ವಲಯಗಳಲ್ಲಿ ಸುಮಾರು ₹41.50 ಲಕ್ಷ ಕೋಟಿ ಹೂಡಿಕೆಗೆ ಬದ್ಧರಾಗಿದ್ದಾರೆ. ಈ ಅತ್ಯುತ್ತಮ ಒಪ್ಪಂದಕ್ಕಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ತಿಳಿಸುತ್ತೇವೆ’ ಎಂದಿದ್ದಾರೆ.
ಸೋಮವಾರದಂದು ಭಾರತ ಹಾಗೂ ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಕ್ಷಣವೇ ಜಾರಿಗೆ ಬರುವಂತೆ, ಎರಡೂ ಕಡೆಯವರು ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಿರುವುದಾಗಿ ಮಾಹಿತಿ ನೀಡಿದ್ದರು.
ಅದರಂತೆ ಅಮೆರಿಕವು ಭಾರತದ ಮೇಲೆ ವಿಧಿಸಿದ್ದ ಸುಂಕವನ್ನು ಶೇಕಡ 25 ರಿಂದ ಶೇಕಡ 18ಕ್ಕೆ ಇಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.