ವಾಷಿಂಗ್ಟನ್: ಮತ್ತೊಂದು ಸುತ್ತಿನ ಪ್ರಮುಖ ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಜಯ ಗಳಿಸಿ ತಾವು ಪ್ರತಿನಿಧಿಸುವ ಪಕ್ಷಗಳಿಂದ ಅಧ್ಯಕ್ಷೀಯ ಅಭ್ಯರ್ಥಿಗಳಾಗಿ ಹೊರಹೊಮ್ಮಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಣಾಹಣಿ ನಡೆಸಲು ಸಜ್ಜಾಗಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿಯಾಗಲು ಜಾರ್ಜಿಯಾದಲ್ಲಿ ಪ್ರಾಥಮಿಕ ಸುತ್ತಿನ ಸ್ಪರ್ಧೆಗಳನ್ನು ಸುಲಭವಾಗಿ ಜಯಿಸಿದ ನಂತರ ಬೈಡನ್ ಅವರು ಮಂಗಳವಾರ ಡೆಮಾಕ್ರಟಿಕ್ ಪಕ್ಷದ ಪೂರ್ವಭಾವಿ ನಾಮನಿರ್ದೇಶನದಲ್ಲೂ ಗೆಲುವು ಸಾಧಿಸಿದ್ದಾರೆ. ಡೆಮಾಕ್ರಟಿಕ್ ನಾಮನಿರ್ದೇಶನ ಗೆಲ್ಲಲು ಒಟ್ಟು 1,968 ಪ್ರತಿನಿಧಿಗಳ ಅಗತ್ಯವಿತ್ತು. ಆದರೆ, ಬೈಡನ್ ಅವರಿಗೆ 3,933 ಪ್ರತಿನಿಧಿಗಳ ಬೆಂಬಲ ಸಿಕ್ಕಿದೆ. ಆಗಸ್ಟ್‌ನಲ್ಲಿ ಚಿಕಾಗೊದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಬೈಡನ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸಲಾಗುತ್ತಿದೆ.
ವಾಷಿಂಗ್ಟನ್‌ದಿಂದ 1,215 ಪ್ರತಿನಿಧಿಗಳ ಬೆಂಬಲವನ್ನು ಡೊನಾಲ್ಡ್ ಟ್ರಂಪ್ ಗಿಟ್ಟಿಸಿದ್ದಾರೆ. ಇದೇ ಜುಲೈನಲ್ಲಿ ಮಿಲ್ವಾಕಿಯಲ್ಲಿ ನಡೆಯಲಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಅವರನ್ನು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ನಾಮನಿರ್ದೇಶನವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತಿದೆ. ಮಂಗಳವಾರ ನಾಮನಿರ್ದೇಶನಗೊಂಡ ನಂತರ ಟ್ರಂಪ್ ಅವರು ಸತತ ಮೂರನೇ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವನ್ನು ಮುನ್ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.