ADVERTISEMENT

ಚುನಾವಣಾ ಪ್ರಚಾರದ ವೆಚ್ಚ: ನಿಧಿ ಸಂಗ್ರಹದಲ್ಲಿ ಟ್ರಂಪ್‌ಗಿಂತ ಬೈಡನ್‌ ಮುಂದೆ

ಏಜೆನ್ಸೀಸ್
Published 17 ಮಾರ್ಚ್ 2024, 15:39 IST
Last Updated 17 ಮಾರ್ಚ್ 2024, 15:39 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು 2024ರ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಈವರೆಗೆ 155 ಮಿಲಿಯನ್‌ ಡಾಲರ್‌ (₹1,284 ಕೋಟಿ ) ಹಣವನ್ನು ಸಂಗ್ರಹಿಸಿದ್ದಾರೆ. ಇದು ಅವರ ಎದುರಾಳಿ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರ ಕೈಯಲ್ಲಿರುವ ಮೊತ್ತಕ್ಕಿಂತ ಹೆಚ್ಚು.

ಕಳೆದ ತಿಂಗಳು ಜೋ ಬೈಡನ್‌ ಅವರು ₹447 ಕೋಟಿ (54 ಮಿಲಿಯನ್‌ ಡಾಲರ್‌) ಸಂಗ್ರಹಿಸಿದ್ದರು. ಅಭಿಯಾನ ಪ್ರಾರಂಭವಾದ ಬಳಿಕ ಅತಿ ಹೆಚ್ಚು ನಿಧಿ ಸಂಗ್ರಹಿಸಿದ ತಿಂಗಳು ಅದಾಗಿದೆ ಎಂದು ಪ್ರಚಾರ ಅಧಿಕಾರಿಗಳು ಹೇಳಿದ್ದಾರೆ.

‘ನಾವು ಸಾಕಷ್ಟು ಹಣವನ್ನು ಸಂಗ್ರಹಿದ್ದೇವೆ. ನಮ್ಮಲ್ಲಿ 15 ಲಕ್ಷ ದಾನಿಗಳಿದ್ದಾರೆ. ಆ ಪೈಕಿ 5 ಲಕ್ಷ ಹೊಸ ದಾನಿಗಳಾಗಿದ್ದಾರೆ. ನಮ್ಮ ಶೇ 97ರಷ್ಟು ದಾನಿಗಳು 200 ಡಾಲರ್‌ ದೇಣಿಗೆಯ ವ್ಯಾಪ್ತಿಯಲ್ಲಿ ಬರುತ್ತಾರೆ’ ಎಂದು ಬೈಡನ್‌ ಕಳೆದ ವಾರ ರೇಡಿಯೊ ಸಂದರ್ಶನದಲ್ಲಿ ತಿಳಿಸಿದ್ದರು. 

ADVERTISEMENT

ಕಳೆದ ವಾರವಷ್ಟೇ ಬೈಡನ್‌ ಮತ್ತು ಟ್ರಂಪ್‌ ಅವರನ್ನು 2024ರ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್‌ ಪಕ್ಷಗಳು ಅಭ್ಯರ್ಥಿಗಳನ್ನಾಗಿ ನಾಮ ನಿರ್ದೇಶನ ಮಾಡಿವೆ. 

ಟ್ರಂಪ್‌ ಅವರು ಫೆಬ್ರುವರಿ ತಿಂಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ. ಜನವರಿ ಅಂತ್ಯದ ವೇಳೆಗೆ ಅವರ ಎರಡು ಪ್ರಮುಖ ಸಮಿತಿಗಳು ಕೇವಲ ₹303 ಕೋಟಿ (36.6 ಮಿಲಿಯನ್‌ ಡಾಲರ್‌) ಹೊಂದಿದ್ದವು. ಆ ಸಮಿತಿಗಳು ಒಟ್ಟಾಗಿ ಆ ತಿಂಗಳಲ್ಲಿ ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಿದ್ದವು.

ಈ ಹಂತದಲ್ಲಿ ಬೈಡನ್‌ ಅವರ ಬಳಿಯಿರುವ ನಗದು ಮೊತ್ತವು ಡೆಮಾಕ್ರಟಿಕ್‌ ಪಕ್ಷದ ಇತಿಹಾಸದಲ್ಲಿಯೇ ಅಭ್ಯರ್ಥಿಯೊಬ್ಬರು ಸಂಗ್ರಹಿಸಿದ ಅತ್ಯಧಿಕ ಮೊತ್ತವಾಗಿದೆ ಎಂದು ಪ್ರಚಾರ ಅಧಿಕಾರಿಗಳು ತಿಳಿಸಿದ್ದಾರೆ. 

ಟ್ರಂಪ್‌ ವಿರುದ್ಧ ಬೈಡನ್‌ ವಾಗ್ದಾಳಿ

ವಾಷಿಂಗ್ಟನ್‌: ‘ಇಬ್ಬರು ಅಭ್ಯರ್ಥಿಗಳು ತಮ್ಮ ಪಕ್ಷಗಳ ಅಧ್ಯಕ್ಷೀಯ ನಾಮನಿರ್ದೇಶನವನ್ನು ಗೆದ್ದಿದ್ದಾರೆ. ಅದರಲ್ಲಿ ಒಬ್ಬರಿಗೆ ತುಂಬಾ ವಯಸ್ಸಾಗಿದ್ದು ಮಾನಸಿಕವಾಗಿ ಕೆಲಸ ಮಾಡಲು ಅನರ್ಹರಾಗಿದ್ದರೆ. ಮತ್ತೊಬ್ಬ ನಾನಾಗಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ವ್ಯಂಗ್ಯವಾಡಿದರು.

ಗ್ರಿಡಿರಾನ್‌ ಕ್ಲಬ್ ಮತ್ತು ಫೌಂಡೇಷನ್‌ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದ ಬೈಡನ್‌ ಅವರು ಟ್ರಂಪ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

‘ಟ್ರಂಪ್‌ (77 ವರ್ಷ) ಅವರ ನೆನಪಿನ ಶಕ್ತಿ ಕುಸಿದಿದ್ದು ಅವರು ಗೊಂದಲಕ್ಕೆ ಒಳಗಾಗಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದಾರೆ’ ಎಂದು 81 ವರ್ಷದ ಬೈಡನ್‌ ಹೇಳಿದರು.

‘ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವು ಅಕ್ಷರಶಃ ಆಕ್ರಮಣಕ್ಕೆ ಒಳಗಾಗುತ್ತಿದೆ. ಒಂದೆಡೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಯುರೋಪ್‌ನಲ್ಲಿ ಮೆರೆಯುತ್ತಿದ್ದಾರೆ. ಆದರೆ ನಮ್ಮ ಹಿಂದಿನ ಅಧ್ಯಕ್ಷರು ಪುಟಿನ್‌ ಎದುರು ತಲೆಬಾಗಿಸುತ್ತಾರೆ ಮತ್ತು ಅವರಿಗೆ ನೀವು ಏನು ಬೇಕಾದರೂ ಮಾಡಿ ಎಂದು ಹೇಳುತ್ತಾರೆ’ ಎಂದು ಬೈಡನ್‌ ಹೇಳಿದರು. 

ಬಳಿಕ ಉಕ್ರೇನ್‌ನ ರಾಯಭಾರಿ ಒಕ್ಸಾನಾ ಮಾರ್ಕರೋವಾ ಮತ್ತು ಎಸ್ಟೋನಿಯದ ಪ್ರಧಾನಿ ಕಾಜಾ ಕಲ್ಲಾಸ್‌ ಅವರನ್ನು ಪರಿಚಯಿಸಿದ ಟ್ರಂಪ್‌ ‘ಅವರಾಗಲಿ ನಾವಾಗಲಿ ತಲೆಬಾಗುವುದಿಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.