ADVERTISEMENT

ಅಮೆರಿಕ– ಆಸ್ಟ್ರೇಲಿಯಾ: ಪರಮಾಣು ಸಜ್ಜಿತ ಜಲಾಂತರ್ಗಾಮಿ ನೌಕಾ ಒಪ್ಪಂದ

ಪಿಟಿಐ
Published 13 ಮಾರ್ಚ್ 2023, 12:42 IST
Last Updated 13 ಮಾರ್ಚ್ 2023, 12:42 IST
   

ವಾಷಿಂಗ್ಟನ್: ಇಂಡೊ– ಪೆಸಿಫಿಕ್ ಸಾಗರದಲ್ಲಿ ಚೀನಾದ ಅತಿಕ್ರಮಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅಮೆರಿಕವು ಆಸ್ಟ್ರೇಲಿಯಾಕ್ಕೆ ಪರಮಾಣು ದಾಳಿ ನಡೆಸಬಲ್ಲ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸಿಕೊಡಲಿದೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸೋಮವಾರ ಸ್ಯಾನ್‌ ಡಿಯಾಗೋಕ್ಕೆ ಆಗಮಿಸಲಿದ್ದು, ಅಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಸಮಕ್ಷಮದಲ್ಲಿ 18 ತಿಂಗಳ ಹಿಂದೆ ಪ್ರಸ್ತಾವನೆಯಾಗಿದ್ದ ಪರಮಾಣು ಒಪ್ಪಂದ ‘ಅಕಾಸ್‘ (ಎಯುಕೆಯುಸ್) ಕುರಿತು ಮಾತುಕತೆ ನಡೆಸಲಿದ್ದಾರೆ.

‘ಅಕಾಸ್‘ ಒಪ್ಪಂದದ ಪ್ರಕಾರ ಚೀನಾ ಮಿಲಿಟರಿಗೆ ಸೆಡ್ಡುಹೊಡೆಯುವಂಥ ಪರಮಾಣು ಸಾಮರ್ಥ್ಯದ ಶಸ್ತ್ರಸಜ್ಜಿತ ಜಲಾಂತರ್ಗಾಮಿ ನೌಕೆಯನ್ನು ಆಸ್ಟ್ರೇಲಿಯಾಕ್ಕೆ ಒದಗಿಸಲು 2021ರಲ್ಲಿ ಘೋಷಿಸಲಾಗಿತ್ತು.

ADVERTISEMENT

ಇದರ ಭಾಗವಾಗಿ ಆಸ್ಟ್ರೇಲಿಯಾ ಐದು ವರ್ಜಿನಿಯಾ ಕ್ಲಾಸ್ ದೋಣಿಗಳನ್ನು ಖರೀದಿಸುತ್ತಿದೆ. ಅಮೆರಿಕದ ತಂತ್ರಜ್ಞಾನ ಬಳಸಿ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿ ನಿರ್ಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಆಸ್ಟ್ರೇಲಿಯಾ ಸರ್ಕಾರವು ಜಲಾಂತರ್ಗಾಮಿ ನೌಕೆ ನಿರ್ಮಿಸಲು ಅಮೆರಿಕ ಜತೆಗಿನ 66 ಬಿಲಿಯನ್ ಡಾಲರ್‌ ವೆಚ್ಚದ ಗುತ್ತಿಗೆಯನ್ನು ಹಿಂಪಡೆದುಕೊಂಡು ರಹಸ್ಯವಾಗಿ ಫ್ರಾನ್ಸ್ ಸರ್ಕಾರಕ್ಕೆ ಗುತ್ತಿಗೆ ಕೊಟ್ಟಿತ್ತು. ಒಪ್ಪಂದದ ವಿರುದ್ಧವಾಗಿ ನಡೆದ ಈ ಬೆಳವಣಿಗೆ ಅಕಾಸ್ ಮೈತ್ರಿ ರಾಷ್ಟ್ರಗಳಲ್ಲಿ ರಾಜತಾಂತ್ರಿಕ ಕಲಹಕ್ಕೆ ಕಾರಣವಾಗಿತ್ತು. ನಂತರ ತಿಳಿಗೊಂಡ ಆಸ್ಟ್ರೇಲಿಯಾ ಮೂಲ ಒಪ್ಪಂದದಂತೆ ನಡೆಯುವ ತೀರ್ಮಾನಕ್ಕೆ ಬಂತು.

ಇಂಡೊ– ಪೆಸಿಫಿಕ್ ಸಾಗರಗಳಲ್ಲಿ ನೌಕಾ ಬಲ ಹೆಚ್ಚಿಸುವ ಸಲುವಾಗಿ ಅಕಾಸ್ ಒಪ್ಪಂದದ ನಡೆಯನ್ನು ಚೀನಾ ವಿರೋಧಿಸಿದೆ. ಅಮೆರಿಕವು ಆಸ್ಟ್ರೇಲಿಯಾಕ್ಕೆ ಪರಮಾಣು ಜಲಾಂತರ್ಗಾಮಿ ನೌಕೆ ತಯಾರಿಸುವ ಹಿನ್ನೆಲೆಯಲ್ಲಿ ‘ನ್ಯೂಕ್ಲಿಯರ್ ಶಕ್ತಿಯ ರಾಷ್ಟ್ರವು ನ್ಯೂಕ್ಲಿಯರ್ ರಹಿತ ರಾಷ್ಟ್ರಕ್ಕೆ ಪರಮಾಣು ಶಸ್ತ್ರಾಸ್ತ್ರ ಪೂರೈಸುತ್ತಿರುವುದು ಜಾಗತಿಕ ಅಣು ಒಪ್ಪಂದ ನಿಯಮಗಳ ಉಲ್ಲಂಘನೆಯಾಗಿದೆ‘ ಎಂದು ಚೀನಾ ವಿರೋಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.