ADVERTISEMENT

ತೈವಾನ್‌ ರಕ್ಷಣೆಗೆ ಸಿದ್ಧ: ಚೀನಾಗೆ ಜೋ ಬೈಡನ್‌ ಕಠಿಣ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 14:33 IST
Last Updated 23 ಮೇ 2022, 14:33 IST
ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡ ಮತ್ತು ಅವರ ಪತ್ನಿ ಯುಕೊ ಕಿಶಿಡ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಟೋಕಿಯೊದ ಸಾಂಪ್ರಾದಾಯಿಕ ಕೊಚುಹಾನ್‌ ರೆಸ್ಟೊರೆಂಟ್‌ನಲ್ಲಿ ಸೋಮವಾರ ಔತಣಕೂಟಕ್ಕೆ ಆಹ್ವಾನಿಸಿದರು– ಎಎಫ್‌ಪಿ ಚಿತ್ರ
ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡ ಮತ್ತು ಅವರ ಪತ್ನಿ ಯುಕೊ ಕಿಶಿಡ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಟೋಕಿಯೊದ ಸಾಂಪ್ರಾದಾಯಿಕ ಕೊಚುಹಾನ್‌ ರೆಸ್ಟೊರೆಂಟ್‌ನಲ್ಲಿ ಸೋಮವಾರ ಔತಣಕೂಟಕ್ಕೆ ಆಹ್ವಾನಿಸಿದರು– ಎಎಫ್‌ಪಿ ಚಿತ್ರ   

ಟೋಕಿಯೊ/ಬೀಜಿಂಗ್‌ (ಎಎಫ್‌ಪಿ/ಎಪಿ):‘ದ್ವೀಪ ರಾಷ್ಟ್ರ ತೈವಾನ್‌ ಮೇಲೆ ಚೀನಾ ಆಕ್ರಮಣಕ್ಕೆ ಮುಂದಾದರೆ, ತೈವಾನ್‌ ರಕ್ಷಣೆಗೆ ನಾವು ಸೇನಾಶಕ್ತಿಯೊಂದಿಗೆ ಮಧ್ಯಪ್ರವೇಶಿಸುತ್ತೇವೆ’ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೋಮವಾರ ಚೀನಾಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಚೀನಾ ಸೇನಾಧಿಕಾರಿಗಳು ತೈವಾನ್‌ ಆಕ್ರಮಣ ಯೋಜನೆ ಸಂಬಂಧ ಚರ್ಚಿಸಿರುವ ಧ್ವನಿಸುರುಳಿ ತುಣುಕು ‘ಲ್ಯೂಡ್‌ ಮೀಡಿಯಾ’ ಯುಟ್ಯೂಬ್‌ ಚಾನೆಲ್‌ನಲ್ಲಿ ಬಹಿರಂಗವಾದ ಬೆನ್ನಲ್ಲೇ ಬೈಡನ್‌, ಈ ಎಚ್ಚರಿಕೆ ರವಾನಿಸಿದ್ದಾರೆ.

ಟೋಕಿಯೊದಲ್ಲಿ ಸುದ್ದಿಗೋಷ್ಠಿಯಲ್ಲಿ ‘ಚೀನಾ ಆಕ್ರಮಣ ಮಾಡಿದರೆ ತೈವಾನ್ ರಕ್ಷಣೆಗೆ ಸೇನೆ ಕಳುಹಿಸಲು ಸಿದ್ಧರಿದ್ದೀರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೈಡನ್‌, ‘ಖಂಡಿತಾ ಸಿದ್ಧ. ಅದು ನಮ್ಮ ಬದ್ಧತೆ ಕೂಡ ಹೌದು’ ಎಂದು ಪ್ರತಿಜ್ಞೆ ಮಾಡಿದರು.

ADVERTISEMENT

ಕ್ವಾಡ್‌ ಸಮಾವೇಶದಲ್ಲಿ ಭಾಗವಹಿಸಲು ಟೋಕಿಯೊಗೆ ಬಂದಿರುವ ಬೈಡನ್‌, ‘ನಾವು ಒಂದೇ ಚೀನಾ ನೀತಿಗೆ ಸಮ್ಮತಿಸಿದ್ದೇವೆ, ಅದಕ್ಕೆ ಸಹಿಯನ್ನೂ ಹಾಕಿದ್ದೇವೆ. ಆದರೆ, ಅದನ್ನು ಬಲವಂತದಿಂದಸಾಧಿಸುವ ಚೀನಾದ ಯೋಚನೆ ಸಾಧುವಲ್ಲ. ಚೀನಾ ಈಗಾಗಲೇ‘ಅಪಾಯದೊಂದಿಗೆ ಚೆಲ್ಲಾಟ’ವಾಡುತ್ತಿದೆ ಎಂದರು.

ಬೈಡನ್‌ಗೆ ಚೀನಾ ತಿರುಗೇಟು:

ಅಮೆರಿಕ ಅಧ್ಯಕ್ಷರ ಪ್ರತಿಜ್ಞೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಚೀನಾ, ‘ತೈವಾನ್‌ ವಿಷಯದಲ್ಲಿ ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧ’ ಎಂದು ತಿರುಗೇಟು ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ‘ತೈವಾನ್ ಅನ್ನು ಚೀನಾದಿಂದ ಬೇರ್ಪಡಿಸಲಾಗದು. ತೈವಾನ್ ಸಮಸ್ಯೆ ಚೀನಾದ ಸಂಪೂರ್ಣ ಆಂತರಿಕ ವಿಷಯ. ತನ್ನ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಯಲ್ಲಿ ಯಾವುದೇ ರಾಜಿ ಅಥವಾ ರಿಯಾಯಿತಿ ತೋರುವುದಿಲ್ಲ.ಚೀನೀಯರ ದೃಢಸಂಕಲ್ಪ ಮತ್ತು ಸಾಮರ್ಥ್ಯವನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.