ಬಿಲಾವಲ್ ಭುಟ್ಟೊ
ಇಸ್ಲಾಮಾಬಾದ್: ಸಿಂಧೂ ನದಿ ನೀರಿನ ಒಪ್ಪಂದದ(ಐಡಬ್ಲ್ಯುಟಿ) ಅನ್ವಯ ನ್ಯಾಯಯುತವಾಗಿ ನಮಗೆ ಸೇರಬೇಕಿರುವ ನೀರಿನ ಪಾಲನ್ನು ಕೊಡಲು ಒಪ್ಪದಿದ್ದರೆ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧ ಸಾರಲಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿದ್ದಾರೆ.
26 ಮಂದಿ ಭಾರತೀಯರ ಜೀವ ತೆಗೆದ ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತವು 1960ರ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದು ಮಾಡಿತ್ತು. ಈ ಒಪ್ಪಂದವನ್ನು ಮರುಸ್ಥಾಪಿಸುವುದಿಲ್ಲ ಎಂದು ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು.
ಅಂತರರಾಷ್ಟ್ರೀಯ ಒಪ್ಪಂದದ ಬಗ್ಗೆ ಶಾ ಅವರ ಹೇಳಿಕೆ ಲಜ್ಜೆಗೇಡಿತನದ ನಿರ್ಲಕ್ಷ್ಯದಿಂದ ಕೂಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಟೀಕಿಸಿದ ಎರಡು ದಿನಗಳ ನಂತರ ಬಿಲಾವಲ್ ಅವರ ಹೇಳಿಕೆ ಬಂದಿದೆ.
ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಬಿಲಾವಲ್, ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ವಿರೋಧಿಸಿದ್ದು, ಪಾಕಿಸ್ತಾನವು ನೀರಿನ ಪಾಲನ್ನು ಪಡೆದೇ ತೀರುವುದಾಗಿ ಹೇಳಿದ್ದಾರೆ.
ಭಾರತಕ್ಕೆ ಎರಡು ಆಯ್ಕೆಗಳಿವೆ. ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳಿ, ಅಥವಾ ನಾವು ಆರು ನದಿಗಳಿಂದ ನೀರನ್ನು ನಾವೇ ಹರಿಸಿಕೊಳ್ಳುತ್ತೇವೆ ಎಂದು ಸಿಂಧೂ ಜಲಾನಯನ ಪ್ರದೇಶದ ಆರು ನದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಒಪ್ಪಂದದ ಸ್ಥಗಿತ ಸಾಧ್ಯವಿಲ್ಲದ ಕಾರಣ ಅದಿನ್ನೂ ಅಸ್ತಿತ್ವದಲ್ಲಿದೆ ಎಂದಿದ್ಧಾರೆ.
ಸಿಂಧೂ ಒಪ್ಪಂದ ಕೊನೆಗೊಂಡಿದೆ ಅಥವಾ ಸ್ಥಗಿತಗೊಂಡಿದೆ ಎಂಬ ಭಾರತದ ಹೇಳಿಕೆ ಕಾನೂನುಬಾಹಿರವಾಗಿದೆ. ಏಕೆಂದರೆ, ಒಪ್ಪಂದ ಸ್ಥಗಿತಗೊಂಡಿಲ್ಲ. ಇದು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳ ಬದ್ಧತೆಯಾಗಿದೆ. ಆದರೆ, ನೀರನ್ನು ನಿಲ್ಲಿಸುವ ಬೆದರಿಕೆ ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಕಾನೂನುಬಾಹಿರವಾಗಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥರಾಗಿರುವ ಬಿಲಾವಲ್, ಭಾರತವು ಬೆದರಿಕೆಯನ್ನು ಮುಂದುವರಿಸಿದರೆ, ನಾವು ಮತ್ತೆ ಯುದ್ಧ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಿರಾಕರಿಸಿದರೆ ಮತ್ತು ಭಯೋತ್ಪಾದನೆಯ ಬಗ್ಗೆ ಯಾವುದೇ ಸಮನ್ವಯವಿಲ್ಲದಿದ್ದರೆ, ಎರಡೂ ದೇಶಗಳಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತದೆ ಎಂದಿದ್ದಾರೆ.
ವಾಯುಪ್ರದೇಶ ನಿರ್ಬಂಧ ಮುಂದುವರಿಕೆ
ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ಇನ್ನೊಂದು ತಿಂಗಳು ವಿಸ್ತರಿಸಿದೆ. ಭಾರತದ ಜತೆಗಿನ ಸಂಘರ್ಷದ ಬೆನ್ನಲ್ಲೇ ಪಾಕಿಸ್ತಾನವು ಈ ನಿರ್ಬಂಧ ಹೇರಿತ್ತು. ಮೇ 23ರವರೆಗೆ ವಿಧಿಸಿದ್ದ ನಿರ್ಬಂಧವನ್ನು ಮೊದಲು ಜೂನ್ 23ರವರೆಗೆ ವಿಸ್ತರಿಸಿತ್ತು. ಇದೀಗ ಇನ್ನೊಂದು ತಿಂಗಳು ವಿಸ್ತರಿಸಿದ್ದು ನಿರ್ಬಂಧವು ಜುಲೈ 23ರ ವರೆಗೆ ಮುಂದುವರಿಯಲಿದೆ ಎಂದು ಪಾಕ್ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.