
ಮೆಲ್ಬೋರ್ನ್: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಡಿ. 14ರಂದು ನಡೆದ ಗುಂಡಿನ ದಾಳಿ ವೇಳೆ ಆರೋಪಿತ ಬಂದೂಕುಧಾರಿ ಒಬ್ಬನ ಅಟ್ಟಹಾಸ ತಡೆಯಲು ಭಾರತ ಮೂಲದ ವ್ಯಕ್ತಿಯೊಬ್ಬರು ಪೊಲೀಸರಿಗೆ ನೆರವಾಗಿ, ಶೌರ್ಯ ಮೆರೆದಿದ್ದರು.
‘ಹನುಕ್ಕಾ’ ಯಹೂದಿ ಹಬ್ಬದ ಪ್ರಾರಂಭೋತ್ಸವಕ್ಕಾಗಿ ಸೇರಿದ್ದ ಅಪಾರ ಜನರ ಮೇಲೆ ಬಂದೂಕುಧಾರಿಗಳಿಬ್ಬರು ಯದ್ವಾತದ್ವಾ ಗುಂಡಿನ ದಾಳಿ ನಡೆಸಿ 15 ಜನರನ್ನು ಕೊಂದಿದ್ದರು. ಈ ವೇಳೆ ಮೂವರು ಭಾರತೀಯ ವಿದ್ಯಾರ್ಥಿಗಳೂ ಸೇರಿದಂತೆ 40 ಜನರು ಗಾಯಗೊಂಡಿದ್ದರು.
ಆರೋಪಿಗಳನ್ನು ಸಿಡ್ನಿ ನಿವಾಸಿ ಸಾಜಿದ್ ಅಕ್ರಂ (50) ಮತ್ತು ಆತನ ಮಗ ನವೀದ್ ಅಕ್ರಂ (24) ಎಂದು ಗುರುತಿಸಲಾಗಿದೆ. ಈ ಪೈಕಿ ಸಾಜಿದ್‌ನನ್ನು ಪೊಲೀಸರು ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಭಾರತೀಯ ಮತ್ತು ನ್ಯೂಜಿಲೆಂಡ್‌ನ ಪೋಷಕರಿಗೆ ನ್ಯೂಜಿಲೆಂಡ್‌ನಲ್ಲಿ ಜನಿಸಿದ ಅಮನ್‌ದೀಪ್ ಸಿಂಗ್ ಬೋಲಾ ಶೌರ್ಯ ಪ್ರದರ್ಶಿಸಿದ ವ್ಯಕ್ತಿ. ಸಾಜಿದ್ ಅಕ್ರಂ ಮನಬಂದಂತೆ ಗುಂಡು ಹಾರಿಸುತ್ತಿದ್ದ ವೇಳೆ, ಸೇತುವೆಯ ಮೇಲಿಂದ ಓಡಿ ಬಂದು ಪೊಲೀಸರ ನೆರವಿನಿಂದ ಆತನನ್ನು ತಡೆಯುವಲ್ಲಿ ಸಿಂಗ್ ಬೋಲಾ ಯಶಸ್ವಿಯಾಗಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
‘ನಾನು ಬಂದೂಕುಧಾರಿಯ ಮೇಲೆ ಎರಗಿ, ಆತನ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಆಗ ನನ್ನ ನೆರವಿಗೆ ಬಂದ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಹೋಗಲು ಬಿಡಬೇಡ ಎಂದು ಹೇಳಿದರು’ ಎಂದು ಸಿಂಗ್ ಬೋಲಾ ಮಾಹಿತಿ ನೀಡಿದ್ದಾರೆ.
‘ಬೀಚ್ ಬಳಿ ಕಬಾಬ್ ತಿನ್ನುತ್ತಾ ಸೂರ್ಯಾಸ್ತವನ್ನು ನೋಡುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಗುಂಡಿನ ಶಬ್ದ ಕೇಳಿಸಿತು. ಆರಂಭದಲ್ಲಿ ಪಟಾಕಿ ಇರಬಹುದು ಎಂದುಕೊಂಡಿದ್ದೆ. ಆದರೆ ಪಟಾಕಿಯಲ್ಲ ಎಂಬುದು ಕೆಲ ಕ್ಷಣದಲ್ಲಿಯೇ ಗೊತ್ತಾಯಿತು. ಬಂದೂಕುಧಾರಿ ಎಲ್ಲಿದ್ದಾನೆ ಎಂದು ನೋಡಿದ ಕೂಡಲೇ, ಆತನ ಅಟ್ಟಹಾಸವನ್ನು ಮಟ್ಟಹಾಕಬೇಕು ಎಂದು ಮುನ್ನುಗ್ಗಿದೆ ಎಂದು ಅವರು ಹೇಳಿದ್ದಾರೆ’ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.