
ಮೃತರಿಗೆ ಸಂತಾಪ ಸೂಚಿಸಿದ ಸಂತ್ರಸ್ತರು, ಎಐ ಚಿತ್ರ
ಸಿಡ್ನಿ: ಇಲ್ಲಿನ ಪ್ರವಾಸಿ ತಾಣ ಬೋಂಡಿ ಬೀಚ್‌ನ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವದಲ್ಲಿ ಭಾನುವಾರ ಗುಂಡಿನ ದಾಳಿ ನಡೆಸಿದ್ದು ಪಾಕಿಸ್ತಾನ ಮೂಲದ ಅಪ್ಪ ಹಾಗೂ ಮಗ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
‘ಯಹೂದಿ ವಿರೋಧಿ ಭಯೋತ್ಪಾದನೆ ಕೃತ್ಯವು ದೇಶದ ಹೃದಯಕ್ಕೆ ಅಪ್ಪಳಿಸಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಕಠಿಣವಾದ ಬಂದೂಕು ನಿಯಮ ಹೊಂದಿದ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ ಕಳೆದ ಮೂರು ದಶಕಗಳಲ್ಲಿಯೇ ನಡೆದ ಭಾರಿ ಪ್ರಮಾಣದ ಭಯೋತ್ಪಾದಕ ದಾಳಿ ಇದಾಗಿದೆ.
‘50 ವರ್ಷ ವಯಸ್ಸಿನ ದಾಳಿಕೋರ ಸಾಜೀದ್ ಅಕ್ರಮ್ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. 24 ವರ್ಷದ ಅವರ ಮಗ ನವೀದ್ ಅಕ್ರಮ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ನ್ಯೂ ಸೌತ್ ವೇಲ್ಸ್‌ನ ಪೊಲೀಸ್ ಆಯುಕ್ತ ಮಲ್ ಲ್ಯಾಲಿಯೊನ್ ತಿಳಿಸಿದ್ದಾರೆ.
‘ದಾಳಿಕೋರರ ಪೈಕಿ ಒಬ್ಬರ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿಯಿದ್ದರೂ, ದಾಳಿ ನಡೆಯುವ ಯಾವುದೇ ಮುನ್ಸೂಚನೆ ಇರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
42 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ: ‘ಭಾನುವಾರ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ 10 ವರ್ಷದಿಂದ 87 ವರ್ಷದವರಿದ್ದಾರೆ. ಉಳಿದಂತೆ 42 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಮುಂದುವರಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ’ ಎಂದು ನ್ಯೂ ಸೌತ್ ವೇಲ್ಸ್‌ನ ಮುಖ್ಯಸ್ಥ (ಪ್ರೀಮಿಯರ್) ಕ್ರಿಸ್ ಮಿನ್ಸ್ ತಿಳಿಸಿದ್ದಾರೆ.
‘ನಾವು ಭಾನುವಾರ ನೋಡಿದ್ದು ಪೂರ್ಣ ಪ್ರಮಾಣದ ದುಷ್ಟ ಕೃತ್ಯ. ಯೆಹೂದಿ ವಿರೋಧಿ, ಭಯೋತ್ಪಾದಕ ಕೃತ್ಯವಾಗಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಹೇಳಿದ್ದಾರೆ.
ಹಣ್ಣಿನ ಮಾರಾಟಗಾರ:
‘ಮೃತ ದಾಳಿಕೋರ ಸಾಜೀದ್ ಪಾಕಿಸ್ತಾನ ಮೂಲದ ವ್ಯಕ್ತಿ. 1998ರಲ್ಲಿ ವಿದ್ಯಾರ್ಥಿ ವೀಸಾದ ಮೂಲಕ ಇಲ್ಲಿಗೆ ಬಂದಿದ್ದ. ಅವನ ಮಗ ಆಸ್ಟ್ರೇಲಿಯಾದಲ್ಲಿ ಜನಿಸಿದ್ದ’ ಎಂದು ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬುರ್ಕೆ ತಿಳಿಸಿದ್ದಾರೆ.
‘ಸಾಜೀದ್ ಹಣ್ಣಿನ ವ್ಯಾಪಾರಿಯಾಗಿದ್ದು, ಅವನ ಮಗ ಇಟ್ಟಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯು ದಿವಾಳಿಯಾದ ನಂತರ, ಎರಡು ತಿಂಗಳ ನಂತರ ಆತನನ್ನು ಕೆಲಸದಿಂದಲೇ ವಜಾಗೊಳಿಸಲಾಗಿತ್ತು. ಕಳೆದ 10 ವರ್ಷಗಳಿಂದಲೂ ಸಾಜೀದ್ ಬಂದೂಕು ಲೈಸೆನ್ಸ್ ಹೊಂದಿದ್ದ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂದೂಕು ಕಾಯ್ದೆ: ಕಠಿಣ ನಿಯಮಗಳ ಪ್ರಸ್ತಾಪ
‘ಸಾಮೂಹಿಕ ಗುಂಡಿನ ದಾಳಿಯ ಬಳಿಕ ದೇಶದಲ್ಲಿ ಬಂದೂಕು ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುವುದು’ ಎಂದು ಪ್ರಧಾನಿ ಆಂಥೊನಿ ಅಲ್ಬನೀಸ್ ತಿಳಿಸಿದ್ದಾರೆ.
‘ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಠಿಣ ಬಂದೂಕು ಕಾಯ್ದೆಯನ್ನು ಜಾರಿಗೆ ತರಲಾಗುವುದು. ಜನರ ಪರಿಸ್ಥಿತಿಗಳು ಬದಲಾಗುತ್ತಿವೆ. ಜನರು ಕ್ರಮೇಣ ಮೂಲಭೂತವಾದಿಗಳಾಗಬಹುದು. ಹೀಗಾಗಿ ಬಂದೂಕು ಪರವಾನಗಿ ಶಾಶ್ವತವಾಗಿ ಇರಬಾರದು’ ಎಂದು ಹೇಳಿದ್ದಾರೆ.
‘ಕೆಲವು ಕಾನೂನುಗಳು ಕಾಮನ್‌ವೆಲ್ತ್‌ಗೆ ಒಳಪಟ್ಟರೆ ಉಳಿದವುಗಳು ರಾಜ್ಯಗಳಲ್ಲಿ ಜಾರಿಯಾಗಲಿವೆ’ ಎಂದು ಆಂಥೊನಿ ವಿವರಿಸಿದ್ದಾರೆ.
ಬಂದೂಕು ಕಾನೂನಿನಲ್ಲಿನ ಬದಲಾವಣೆಗಳ ಕುರಿತಂತೆ ಸೋಮವಾರ ನಡೆದ ರಾಷ್ಟ್ರೀಯ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ರಾಜ್ಯಗಳಲ್ಲಿಯೂ ಈ ಸಂಬಂಧ ಕಾನೂನು ಬದಲಾವಣೆಯಾಗುವ ಅಗತ್ಯವಿದೆ ಎಂದಿದ್ದಾರೆ. 1996ರಲ್ಲಿ ಪೋರ್ಟ್ ಅರ್ಥರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 35 ಮಂದಿ ಮೃತಪಟ್ಟ ಬಳಿಕ ಆಸ್ಟ್ರೇಲಿಯಾ ಸರ್ಕಾರವು ಬಂದೂಕು ನಿಯಮಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಜಾರಿಗೆ ತಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.