ADVERTISEMENT

ಉಗ್ರ ರಾಣಾ ಪೌರತ್ವ ರದ್ದತಿಗೆ ಮುಂದಾದ ಕೆನಡಾ: ವರದಿ

ಭಾರತಕ್ಕೆ ಪ್ರಧಾನಿ ಕಾರ್ನಿ ಭೇಟಿಗೂ ಮುನ್ನ ಬೆಳವಣಿಗೆ

ಪಿಟಿಐ
Published 24 ಫೆಬ್ರುವರಿ 2026, 12:58 IST
Last Updated 24 ಫೆಬ್ರುವರಿ 2026, 12:58 IST
ತಹವ್ವುರ್ ರಾಣಾ
ತಹವ್ವುರ್ ರಾಣಾ   

ಟೊರೊಂಟೊ: 2008ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಎದುರಿಸುತ್ತಿರುವ ತಹವ್ವುರ್ ರಾಣಾ ಹುಸೇನ್‌ ಪೌರತ್ವ ರದ್ದುಪಡಿಸುವುದಕ್ಕೆ ಕೆನಡಾ ಸರ್ಕಾರ ಮುಂದಾಗಿದೆ.

ಪ್ರಧಾನಿ ಮಾರ್ಕ್‌ ಕಾರ್ನಿ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿಯೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಪಾಕಿಸ್ತಾನದಲ್ಲಿ ಜನಿಸಿರುವ ರಾಣಾ ಕೆನಡಾ ಪೌರತ್ವ ಹೊಂದಿದ್ದು, ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ಸಂಚುಕೋರ ಡೇವಿಡ್ ಕೋಲ್‌ಮನ್ ಹೆಡ್ಲಿ ಅಲಿಯಾಸ್‌ ದಾವೂದ್‌ ಗಿಲಾನಿಯ ಆಪ್ತನೂ ಆಗಿದ್ದಾನೆ. ಹೆಡ್ಲಿ ಅಮೆರಿಕದ ಪ್ರಜೆ.

ADVERTISEMENT

‘2001ರಲ್ಲಿ ರಾಣಾ ಪಡೆದಿರುವ ಕೆನಡಾ ಪೌರತ್ವವನ್ನು ಹಿಂಪಡೆಯಲು ಉದ್ದೇಶಿಸಲಾಗಿದೆ’ ಎಂದು ವಲಸೆ ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದನ್ನು ಉಲ್ಲೇಖಿಸಿ ಗ್ಲೊಬಲ್ ನ್ಯೂಸ್‌ ವರದಿ ಮಾಡಿದೆ.

ಭಯೋತ್ಪಾದಕ ಕೃತ್ಯಗಳ ಕಾರಣಗಳಿಂದಾಗಿ ರಾಣಾ ಪೌರತ್ವವನ್ನು ರದ್ದು ಮಾಡಲಾಗುತ್ತಿಲ್ಲ. ಪೌರತ್ವಕ್ಕಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಆತ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ಕೆನಡಾದ ವಲಸೆ, ನಿರಾಶ್ರಿತರು ಹಾಗೂ ಪೌರತ್ವ(ಐಆರ್‌ಸಿಸಿ) ಇಲಾಖೆಯು ತಿಳಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. 

ಈ ಬಳಿಕ, ರಾಣಾನನ್ನು ಹಸ್ತಾಂತರಿಸುವಂತೆ ಭಾರತವು ಅಮೆರಿಕಕ್ಕೆ ಕೋರಿತ್ತು. ಸುದೀರ್ಘ ಕಾನೂನು ಹೋರಾಟದ ಬಳಿಕ, ಕಳೆದ ವರ್ಷ ಏಪ್ರಿಲ್‌ನಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ನವದೆಹಲಿಗೆ ಬಂದಿಳಿದ ಕೂಡಲೇ, ಆತನನ್ನು ಎನ್‌ಐಎ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.