ADVERTISEMENT

ಭಾರತದ ಗಡಿಭಾಗದಲ್ಲಿ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ

ಭಾರತದ ಗಡಿಭಾಗದಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಾಣ: ತೀವ್ರ ಕಳವಳ

ಪಿಟಿಐ
Published 26 ಡಿಸೆಂಬರ್ 2024, 13:32 IST
Last Updated 26 ಡಿಸೆಂಬರ್ 2024, 13:32 IST
<div class="paragraphs"><p>ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ಮೀನು ಹಿಡಿಯುತ್ತಿರುವ ಮೀನುಗಾರರು</p></div>

ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ಮೀನು ಹಿಡಿಯುತ್ತಿರುವ ಮೀನುಗಾರರು

   

–ಪಿಟಿಐ ಚಿತ್ರ

ಬೀಜಿಂಗ್‌: ವಿಶ್ವದಲ್ಲೇ ಅತಿ ದೊಡ್ಡದಾದ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಒಪ್ಪಿಗೆ ನೀಡಿದೆ. ಭೂಮಿ ಮೇಲಿನ ಅತ್ಯಂತ ದೊಡ್ಡ ಯೋಜನೆ ಇದಾಗಿದ್ದು, 137 ಬಿಲಿಯನ್‌ ಡಾಲರ್‌ (₹11.67 ಲಕ್ಷ ಕೋಟಿ) ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಬ್ರಹ್ಮಪುತ್ರ ನದಿಗೆ ಈ ಅಣೆಕಟ್ಟು ನಿರ್ಮಿಸಲು ಉದ್ದೇಶಿಸಿದ್ದು, ಈ ನದಿ ನೀರಿನಲ್ಲಿ ಪಾಲು ಹೊಂದಿರುವ ಭಾರತ ಹಾಗೂ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿವೆ.

ADVERTISEMENT

‘ಚೀನಾ ಸರ್ಕಾರವು ಯರ್ಲಿಂಗ್‌ ಝಿಂಗ್ಬೊ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಜಲವಿದ್ಯುತ್‌ ಯೋಜನೆ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿದೆ’ ಎಂದು ಅಧಿಕಾರಿಯೊಬ್ಬರ ಹೇಳಿಕೆಯೊಂದನ್ನು ಉಲ್ಲೇಖಿಸಿ ‘ಕ್ಸಿನುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತದ ಅರುಣಾಚಲ ಪ್ರದೇಶಕ್ಕೆ ಪ್ರವೇಶಕ್ಕೂ ಮುನ್ನ ನದಿಯು ದೊಡ್ಡದಾಗಿ ಯು–ಟರ್ನ್‌ ಪಡೆಯುವ ಹಿಮಾಲಯದ ಆಳವಾದ ಕಮರಿ ಪ್ರದೇಶದಲ್ಲಿ ಈ ಅಣೆಕಟ್ಟು ನಿರ್ಮಾಣಗೊಳ್ಳಲಿದೆ. ಭೂಮಿ ಮೇಲೆ ಇದುವರೆಗೂ ನಿರ್ಮಾಣಗೊಂಡ ಮೂಲಸೌಕರ್ಯ ಯೋಜನೆಗಳಲ್ಲಿಯೇ ಗರಿಷ್ಠ ವೆಚ್ಚದ್ದು ಇದಾಗಿದೆ. ನಿರ್ಮಾಣ ಪೂರ್ಣಗೊಂಡ ಬಳಿಕ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಎಂಬ ಖ್ಯಾತಿಗೂ ಪಾತ್ರವಾಗಲಿದೆ’ ಎಂದು ಹಾಂಗ್‌ಕಾಂಗ್‌ ಮೂಲದ ‘ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್’ ವರದಿ ಮಾಡಿದೆ.

2015ರಲ್ಲಿ ಟಿಬೆಟ್‌ನಲ್ಲಿ ಚೀನಾ ನಿರ್ಮಿಸಿದ್ದ ಅತ್ಯಂತ ದೊಡ್ಡ ಅಣೆಕಟ್ಟಾದ ‘ಜಾಮ್‌ ಜಲವಿದ್ಯುತ್‌ ಕೇಂದ್ರ’ವು ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ.

ಭಾರತ ಕಳವಳ:

ನದಿಯಲ್ಲಿ ಹರಿಯುವ ನೀರಿನ ಮೇಲೆ ಚೀನಾ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಅಣೆಕಟ್ಟಿನ ಗಾತ್ರದ ಲೆಕ್ಕಾಚಾರದಂತೆ ನದಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿಸಿದರೆ, ಕೆಳಭಾಗದಲ್ಲಿ ಪ್ರವಾಹ ಸ್ಥಿತಿ ತಲೆದೋರುವ ಸಾಧ್ಯತೆಯಿದೆ ಎಂದು ತಿಳಿಸಿದೆ. 

ಅರುಣಾಚಲ ಪ್ರದೇಶದಲ್ಲಿ ಭಾರತ ಕೂಡ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ.

ಟಿಬೆಟ್‌ ಸ್ವಾಯತ್ತ ಪ್ರಾಂತ್ಯದಲ್ಲಿ ಹರಿದು ಬರುತ್ತಿರುವ ಯರ್ಲಿಂಗ್‌ ಝಿಂಗ್ಬೊ  (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ವಿಹಂಗಮ ನೋಟ– ಎಎಫ್‌ಪಿ ಚಿತ್ರ

ಯೋಜನೆಯ ಮಾಹಿತಿ

  • 300 ಬಿಲಿಯನ್‌ ಕಿ.‌ವ್ಯಾಟ್‌ (30 ಸಾವಿರ ಕಿ.ವ್ಯಾ )

  • ವಾರ್ಷಿಕ ವಿದ್ಯುತ್‌ ಉತ್ಪಾದನೆಯ ಗುರಿ

  • 30 ಕೋಟಿ ಮಂದಿ

  • ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಒಂದು ವರ್ಷ ಪಡೆಯಬಹುದಾದ ಜನರ ಸಂಖ್ಯೆ

  • 20 ಕಿ.ಮೀ.

  • ನಾಮ್ಚಾ ಬರ್ವಾ ಪರ್ವತದ ಮೂಲಕ ನಾಲ್ಕರಿಂದ ಆರು ಸುರಂಗ ನಿರ್ಮಿತವಾಗಲಿರುವ ಉದ್ದ

  • 3 ಬಿಲಿಯನ್‌ ಡಾಲರ್‌ (₹25,584 ಕೋಟಿ)

  • ಟಿಬೆಟ್‌ಗೆ ವಾರ್ಷಿಕ ದೊರೆಯುವ ಆದಾಯ

  • ಉಪಯೋಗ: ನೀರಾವರಿ, ಕೈಗಾರಿಕೆ ಬೆಳವಣಿಗೆ, ಸಾರಿಗೆ ವ್ಯವಸ್ಥೆ ಸುಧಾರಣೆ, ವ್ಯಾಪಾರ ವೃದ್ಧಿ, ಉದ್ಯೋಗ ಸೃಷ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.