ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌: 360ಕ್ಕೆ ಏರಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 4:31 IST
Last Updated 3 ಫೆಬ್ರುವರಿ 2020, 4:31 IST
   

ವುಹಾನ್: ಚೀನಾದಲ್ಲಿ ಕೊರೊನಾ ವೈರಸ್‌ ಮತ್ತಷ್ಟು ಜನರನ್ನು ಬಲಿ ಪಡೆದುಕೊಂಡಿದ್ದು, ಮೃತಪಟ್ಟವರ ಸಂಖ್ಯೆ 360ಕ್ಕೆ ಏರಿಕೆಯಾಗಿದೆ. ಅಲ್ಲದೆ ವೈರಸ್ ಹರಡುವ ಭೀತಿಯಿಂದಾಗಿ ಜಾಗತಿಕವಾಗಿ ರಾಷ್ಟ್ರಗಳು ಚೀನೀಯರಿಗೆ ಪ್ರವೇಶವನ್ನು ನಿರಾಕರಿಸುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹುಬೆನಲ್ಲಿನ ಅಧಿಕಾರಿಗಳು 56 ಹೊಸ ಸಾವು-ನೋವುಗಳನ್ನು ವರದಿ ಮಾಡಿದ್ದು, ಅದು ಚೀನಾದಲ್ಲಿನ ಕೊರೊನಾ ವೈರಸ್‌ನಿಂದ ಸಂಭವಿಸಿದ ಸಾವುಗಳ ಸಂಖ್ಯೆಯನ್ನು 360ಕ್ಕೆ ಏರಿಕೆ ಮಾಡಿದೆ.

ವೈರಸ್ ಹರಡುವುದನ್ನು ತಡೆಯಲು ಅಧಿಕಾರಿಗಳು ಹೆಣಗಾಡುತ್ತಿದ್ದು, ಭಾನುವಾರ ಪೂರ್ವ ನಗರವಾದ ವೆನ್‌ಜೌನಲ್ಲಿ ಕ್ರಮ ಕೈಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಸ್ತೆಗಳನ್ನು ಮುಚ್ಚಿದ್ದಾರೆ ಮತ್ತು ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಹೇಳಿದ್ದಾರೆ. ವೆನ್‌ಜೌ ವುಹಾನ್‌ನಿಂದ 500 ಮೀಟರ್‌ಗಳಷ್ಟು ದೂರದಲ್ಲಿರುವುದರಿಂದಾಗಿ ವೈರಸ್ ಹರಡುವ ಸಾಧ್ಯತೆಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಈ ನಡುವೆ, ಫಿಲಿಪ್ಪೀನ್ಸ್‌ನಲ್ಲಿ ಈ ಸೋಂಕಿನಿಂದಾಗಿ 44 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಚೀನಾದ ಹೊರಗೆ ವರದಿಯಾಗಿರುವ ಮೊದಲ ಸಾವು ಇದಾಗಿದೆ. ಸದ್ಯ ಚೀನಾದಾದ್ಯಂತ 16,400 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಇತರೆ 24 ರಾಷ್ಟ್ರಗಳಿಗೆ ವ್ಯಾಪಿಸಿದೆ.

ಜಿ 7 ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಅಮೆರಿಕ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳನ್ನು ದೃಢಪಡಿಸಿವೆ. ಹೀಗಾಗಿ ಶೀಘ್ರದಲ್ಲೇ ಜಂಟಿ ಪ್ರತಿಕ್ರಿಯೆ ನೀಡುವ ಕುರಿತು ಅವರು ಚರ್ಚಿಸಲಿದ್ದಾರೆ ಎಂದು ಜರ್ಮನಿಯ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಭಾನುವಾರ ಹೇಳಿದ್ದಾರೆ.

ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಚೀನಾವು ವುಹಾನ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಪ್ರಯಾಣಕ್ಕೆ ತಡೆಯನ್ನೊಡ್ಡಿದೆ. ಇಲ್ಲಿನ ಎಲ್ಲಾ ಸಾರಿಗೆಯನ್ನು ನಿಷೇಧಿಸಲಾಗಿದ್ದು, ಸುಮಾರು 50 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ವುಹಾನ್‌ನನ್ನು ಬಂದ್ ಮಾಡಿದ 10 ದಿನಗಳ ಬಳಿಕ ಅಧಿಕಾರಿಗಳು ಕರಾವಳಿ ನಗರವಾದ ಜೆಜಿಂಗ್‌ನ ವೆನ್‌ಜೌ ಪ್ರಾಂತ್ಯದ ಮೇಲೂ ಕಠಿಣ ಕ್ರಮಗಳನ್ನು ಹೇರಿದ್ದು, ಸುಮಾರು 9 ದಶಲಕ್ಷ ಜನರು ಇಲ್ಲಿದ್ದಾರೆ.

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.