ADVERTISEMENT

ವಿಶ್ವಸಂಸ್ಥೆ ಬಳಸಿ ಮಧ್ಯ ಪ್ರವೇಶಿಸಲು ಅಮೆರಿಕ ಯತ್ನ: ಚೀನಾ ಆರೋಪ

ಏಜೆನ್ಸೀಸ್
Published 11 ನವೆಂಬರ್ 2019, 19:39 IST
Last Updated 11 ನವೆಂಬರ್ 2019, 19:39 IST
ದಲೈ ಲಾಮಾ
ದಲೈ ಲಾಮಾ   

ಬೀಜಿಂಗ್: ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿ ಮಧ್ಯಪ್ರವೇಶಿಸಲುಅಮೆರಿಕವು ವಿಶ್ವಸಂಸ್ಥೆಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ.

‘ಉತ್ತರಾಧಿಕಾರಿ ಆಯ್ಕೆ ವಿಷಯ ಟಿಬೆಟ್‌ನ ಬೌದ್ಧರಿಗೆ ಸೇರಿದ್ದಾಗಿದೆ ಹೊರತು ಚೀನಾ ಸರ್ಕಾರಕ್ಕಲ್ಲ. ಈ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕೆಂದು ಅಮೆರಿಕ ಬಯಸುತ್ತದೆ’ ಎಂದು ಅಮೆರಿಕದ ರಾಯಭಾರಿ (ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ) ಸ್ಯಾಮ್ ಬ್ರೌನ್‌ಬ್ಯಾಕ್ ಕಳೆದ ವಾರ ಹೇಳಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ, ‘ಈ ವಿಷಯದಲ್ಲಿ ವೈಫಲ್ಯ ಉಂಟಾಗುತ್ತದೆ ಮತ್ತು ಅಂತರರಾಷ್ಟ್ರೀಯ ಸಮುದಾಯದಿಂದ ವಿರೋಧ ವ್ಯಕ್ತವಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ಟಿಬೆಟ್‌ ಅಭಿವೃದ್ಧಿ ಪಡಿಸಿದ ಹಾಗೂ ಅಲ್ಲಿನ ಜನರಿಗೆ ಆಧುನಿಕತೆ ಪರಿಚಯಿಸಿದ್ದು ತಾನೇ ಎಂದು ಹೇಳಿಕೊಳ್ಳುವ ಚೀನಾ, ದಲೈ ಲಾಮಾ ಉತ್ತರಾಧಿಕಾರಿಯನ್ನು ತಾನೇ ನೇಮಕ ಮಾಡುವುದಾಗಿ ಹೇಳುತ್ತಿದೆ.

1995ರಲ್ಲಿ ಆರು ವರ್ಷದ ಬಾಲಕನನ್ನು ಪಂಚೆನ್‌ ಲಾಮಾ ಎಂದು ಆಯ್ಕೆ ಮಾಡಿ ತನ್ನ ವಶದಲ್ಲಿ ಇರಿಸಿಕೊಂಡಿತು.

ಚೀನಾದ ನಿಲುವಿನ ಬಗ್ಗೆ ಎಚ್ಚರವಹಿಸಿರುವ 84 ವರ್ಷದ ದಲೈ ಲಾಮಾ, ಶತಮಾನಗಳಷ್ಟು ಹಳೆಯ ಪದ್ಧತಿಯನ್ನು ಕೈಬಿಡಲು ಸಿದ್ಧರಾಗಿದ್ದಾರೆ.

ಸಣ್ಣ ಬಾಲಕನಲ್ಲಿ ಪುನರ್ಜನ್ಮದ ಲಕ್ಷಣಗಳನ್ನು ಗುರುತಿಸಿ ಆತನನ್ನು ಉತ್ತರಾಧಿಕಾರಿ ಎಂದು ನೇಮಕ ಮಾಡಲಾಗುತ್ತಿತ್ತು. ಈ ಪದ್ಧತಿ ಕೈಬಿಟ್ಟು, ಬಹುಶಃ ಬಾಲಕಿಯನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಬಹುದು ಅಥವಾ ತಾನೇ ಕೊನೆಯ ದಲೈ ಲಾಮಾ ಎಂದು ಘೋಷಿಸಿಕೊಳ್ಳಬಹುದು ಎಂದು ದಲೈ ಲಾಮಾ ಸುಳಿವು ನೀಡಿದ್ದಾರೆ.

ಟಿಬೆಟ್‌ ಸ್ವಾತಂತ್ರ್ಯಕ್ಕಾಗಿ ದಲೈ ಲಾಮಾ ಅವರು ನಡೆಸುತ್ತಿರುವ ಹೋರಾಟ ಅವರೊಂದಿಗೇ ಕೊನೆಗಾಣುತ್ತದೆ ಎಂದು ಕಾಯುತ್ತಿರುವುದಾಗಿ ಚೀನಾ ಪರೋಕ್ಷವಾಗಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.