ADVERTISEMENT

ಕೊರೊನಾ ಮಾಹಿತಿ ಮರೆಮಾಚಿಲ್ಲ, ವೈರಸ್‌ ಮೂಲ ವುಹಾನ್‌ ಲ್ಯಾಬ್‌ ಅಲ್ಲ: ಚೀನಾ

ಪಿಟಿಐ
Published 17 ಏಪ್ರಿಲ್ 2020, 13:16 IST
Last Updated 17 ಏಪ್ರಿಲ್ 2020, 13:16 IST
   

ಬೀಜಿಂಗ್‌: ಕೊರೊನಾ ವೈರಸ್‌ ಸಾಂಕ್ರಾಮಿಕಗೊಳ್ಳುತ್ತಿದ್ದದ್ದನ್ನು ಚೀನಾ ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿತ್ತು ಎಂಬ ವಾದಗಳನ್ನು ಚೀನಾ ಶುಕ್ರವಾರ ನಿರಾಕರಿಸಿದೆ. ಅಲ್ಲದೆ, ಕೊರೊನಾ ವೈರಸ್‌ನ ವುಹಾನ್‌ನ ವೈರಾಣು ಲ್ಯಾಬ್‌ನಿಂದ ಹುಟ್ಟಿಕೊಂಡಿತು ಎನ್ನುವ ಮೂಲಕ ಅಮೆರಿಕ ನಾಗರಿಕರ ದೃಷ್ಟಿಯನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಆರೋಪಿಸಿದೆ.

ಕೊರೊನಾ ವೈರಸ್‌ನಿಂದ ಸಂಭವಿಸಿದ ಸಾವಿನ ಸಂಖ್ಯೆಗಳ ಪರಿಷ್ಕೃತ ಅಂಕಿ ಸಂಖ್ಯೆಗಳನ್ನು ಚೀನಾ ಶುಕ್ರವಾರ ಪ್ರಕಟಿಸಿತು. ಅದರಂತೆ ಅಲ್ಲಿ ಸೋಂಕಿನಿಂದಾಗಿ 4,632 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ ಕೊರೊನಾ ಉಗಮಸ್ಥಾನ ವುಹಾನ್‌ನಲ್ಲೇ ಸಾವಿಗೀಡಾಗಿದ್ದಾರೆ. ಈ ಅಂಕಿ ಅಂಶ ಪ್ರಕಟವಾದ ಹಿನ್ನೆಲೆಯಲ್ಲೇ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಾನ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

‘ಸಾಂಕ್ರಾಮಿಕ ಕಾಯಿಲೆಗೆ ಸಂಬಂಧಿಸಿದ ಪರಿಷ್ಕೃತ ಅಂಕಿಅಂಶಗಳನ್ನು ಬಹಿರಂಗಪಡಿಸುವುದು ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಅಭ್ಯಾಸ,’ ಎಂದು ಅವರು ಹೇಳಿದ್ದಾರೆ. ಈ ಮೂಲಕ, ಚೀನಾ ಕೊರೊನಾ ವೈರಸ್‌ಗೆ ಸಂಬಂಧಿಸಿದ ಅಂಕಿಆಂಶಗಳನ್ನು ಮುಚ್ಚಿಟ್ಟಿದೆ ಎಂಬ ಆರೋಪಗಳ ನಡುವೆಯೇ ಬಂದ ಪರಿಷ್ಕೃತ ಮಾಹಿತಿಯನ್ನು ಸಮರ್ಥಿಸಿಕೊಂಡರು.

ADVERTISEMENT

‘ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಆರಂಭದ ಕೆಲವು ವರದಿಗಳು ತಡವಾಗಿ ಬಂದಿದ್ದವು. ಕೆಲ ವರದಿಗಳಲ್ಲಿ ಲೋಪಗಳಿದ್ದವು ಮತ್ತು ತಪ್ಪಾಗಿದ್ದವು,’ ಎಂದೂ ಅವರು ಈ ವೇಳೆ ಹೇಳಿಕೊಂಡರು.

‘ಆದರೆ, ನಾವು ಯಾವುದನ್ನೂ ಮರೆಮಾಚಿಲ್ಲ ಮತ್ತು, ಮರೆಮಾಚುವಿಕೆಯನ್ನು ನಾವು ಎಂದಿಗೂ ಒಪ್ಪುವುದಿಲ್ಲ’ ಎಂದು ಎಂದು ಝಾಹೋ ಹೇಳಿದರು.

ಕಳೆದ ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ಗೆ ಸಂಬಂಧಿಸಿದ ಅಂಕಿಅಂಶ ಮತ್ತು ಮಾಹಿತಿಗಳನ್ನು ಉದ್ದೇಶಪೂರ್ಕವಾಗಿಯೇ ಮರೆಮಾಚಲಾಗಿದೆ. ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಮತ್ತು ವೈರಸ್‌ನ ಮೂಲವನ್ನು ಮುಚ್ಚಿಡಲಾಗಿದೆ ಎಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಚೀನಾವನ್ನು ತೀವ್ರವಾಗಿ ಟೀಕಿಸುತ್ತಿರುವ ಮಧ್ಯೆಯೇ ಚೀನಾದಿಂದ ಈ ಪ್ರತಿಕ್ರಿಯೆ ಬಂದಿದೆ. ಈ ಪರಿಸ್ಕೃತ ಅಂಕಿಸಂಖ್ಯೆಗಳನ್ನು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.