ADVERTISEMENT

ತೈವಾನ್ ಸುತ್ತ ಸೇನಾ ತಾಲೀಮು ಪೂರ್ಣ, ಯುದ್ಧಕ್ಕೆ ಸಿದ್ಧ: ಚೀನಾ ಸೇನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 15:56 IST
Last Updated 10 ಏಪ್ರಿಲ್ 2023, 15:56 IST
   

ತೈಪೆ, ತೈವಾನ್‌ (ಎಪಿ): ತೈವಾನ್‌ ಅಧ್ಯಕ್ಷೆ ಅಮೆರಿಕ ಪ್ರವಾಸ ಕೈಗೊಂಡಿದ್ದಕ್ಕೆ ಪ್ರತೀಕಾರವಾಗಿ ತೈವಾನ್‌ ಸುತ್ತಮುತ್ತ ಮೂರು ದಿನಗಳ ಸೇನಾ ತಾಲೀಮು ಪೂರ್ಣಗೊಳಿಸಿ‌ರುವ ಚೀನಾ, ಯುದ್ಧಕ್ಕೆ ಸಿದ್ಧ ಎಂದು ಸೋಮವಾರ ಘೋಷಿಸಿದೆ.

ತೈವಾನ್‌ಗೆ ಎಚ್ಚರಿಕೆ ನೀಡುವ ಸಲುವಾಗಿ ಮೂರು ದಿನಗಳ ಸೇನಾ ತಾಲೀಮು ಆರಂಭಿಸಿರುವುದಾಗಿ ಈ ಹಿಂದೆ ಚೀನಾ ಸೇನೆ ಘೋಷಿಸಿತ್ತು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳನ್ನು ತೈವಾನ್‌ನತ್ತ ಕಳುಹಿಸಿತ್ತು.

ಆಗಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತೀಕಾರವಾಗಿ ಕಳೆದ ಆಗಸ್ಟ್‌ನಲ್ಲಿ ತೈವಾನ್ ಸುತ್ತಮುತ್ತಲ ಸಮುದ್ರಗಳ ಬಳಿ ಕ್ಷಿಪಣಿ ದಾಳಿಯನ್ನು ಇದೇ ಮಾದರಿಯಲ್ಲಿ ಚೀನಾ ನಡೆಸಿತ್ತು.

ADVERTISEMENT

ಈ ಸಮರಾಭ್ಯಾಸವು ತೈವಾನ್‌ನನ್ನು ಸಮುದ್ರ ಮತ್ತು ವಾಯು ಸಂಚಾರಗಳಿಂದ ಕಟ್ಟಿಹಾಕುವ ನಿಟ್ಟಿನಲ್ಲಿ ಚೀನೀ ಪಡೆಗಳಿಗೆ ಒಂದು ಉತ್ತಮ ಅವಕಾಶವಾಗಿ ದೊರೆತಿದೆ ಎಂದು ಮಿಲಿಟರಿ ತಜ್ಞರು ಹೇಳುತ್ತಾರೆ. ಒಂದು ವೇಳೆ ಯುದ್ಧ ನಡೆದರೆ ತೈವಾನ್ ನನ್ನು ಈ ದಾರಿಯಲ್ಲಿಯೇ ಕಟ್ಟಿಹಾಕಬೇಕಿದ್ದು, ಅಂತಹ ಅವಕಾಶ ಬಳಸಿಕೊಳ್ಳುವ ತರಬೇತಿಯನ್ನು ಚೀನಾ ಪಡೆಗಳು ಪಡೆಯುತ್ತಿವೆ ಎಂದು ಪರಿಣತರು ಹೇಳಿದ್ದಾರೆ.

ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು ಅಮೆರಿಕ ಸಂಸತ್ತಿನ ಕೆಳ ಮನೆಯ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರೊಂದಿಗೆ ಸಭೆ ನಡೆಸಿ ಬೆಂಬಲ ಕೋರಿದ್ದರು. ಅಮೆರಿಕ ಕಾಂಗ್ರೆಸ್ ನಿಯೋಗ ಸಹ ತೈವಾನ್‌ನಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.