ADVERTISEMENT

ಭಾರತದೊಂದಿಗಿನ ಗಡಿ ವಿವಾದ: ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಚೀನಾ

ಏಜೆನ್ಸೀಸ್
Published 30 ಮೇ 2020, 15:47 IST
Last Updated 30 ಮೇ 2020, 15:47 IST
   

ಬೀಜಿಂಗ್‌: ಭಾರತ ಮತ್ತು ಚೀನಾ ಗಡಿ ವಿವಾದ ಬಗೆ ಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿತಿಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಸ್ತಾಪವನ್ನುಚೀನಾ ಮತ್ತೊಮ್ಮೆ ತಿರಸ್ಕರಿಸಿದೆ.

ಈ ಸಂಬಂಧ ಶುಕ್ರವಾರ ಪ್ರಕಟಣೆ ಹೊರಡಿಸಿರುವಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹಾವೊ ಲಿಜಿಯಾನ್‌, ‘ಭಾರತ ಮತ್ತು ಚೀನಾ ವಿವಾದವನ್ನುಬಗೆಹರಿಸಿಕೊಳ್ಳಲು ಸಮರ್ಥವಾಗಿವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಶ್ವೇತಭವನದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್‌, ‘ನಾನು ಮಧ್ಯಸ್ಥಿಕೆ ವಹಿಸುವುದರಿಂದ ಸಹಾಯವಾಗುತ್ತದೆ ಎಂದು ಅವರು (ಭಾರತ–ಚೀನಾ) ಭಾವಿಸಿದರೆ, ಮಧ್ಯಸ್ಥಿಕೆ ವಹಿಸುತ್ತೇನೆ’ ಎಂದು ಹೇಳಿದ್ದರು.

ADVERTISEMENT

ಇದಕ್ಕೂ ಮೊದಲು ಟ್ವಿಟರ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಟ್ರಂಪ್‌,‘ಎರಡೂ ದೇಶಗಳ ನಡುವಣ ಗಡಿವಿವಾದದ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ಅಮೆರಿಕಸಿದ್ಧವಿರುವುದಾಗಿ ಭಾರತ ಮತ್ತು ಚೀನಾಗೆ ತಿಳಿಸಿದ್ದೇವೆ’ ಎಂದು ಬರೆದುಕೊಂಡಿದ್ದರು. ಆದರೆ, ಈ ಪ್ರಸ್ತಾಪವನ್ನು ಎರಡೂ ರಾಷ್ಟ್ರಗಳು ತಿರಸ್ಕರಿಸಿದ್ದವು.

ಗಡಿ ವಿವಾದನ್ನು ಶಾಂತಿಯುತವಾಗಿ ಬಗೆಹರಿಸಲು ಚೀನಾದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಹೇಳಿತ್ತು.

ಭಾರತ ಮತ್ತು ಚೀನಾ ನಡುವೆ ಸುಮಾರು 3,500 ಕಿ.ಮೀ ಉದ್ದದ ಗಡಿ ಇದೆ. ಲಡಾಖ್‌ ಮತ್ತು ಉತ್ತರ ಸಿಕ್ಕಿಂನಲ್ಲಿ ಉಭಯ ದೇಶಗಳ ಸೇನೆಯು ಜಮಾವಣೆಗೊಳ್ಳುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸೂಚನೆಯನ್ನು ನೀಡಿದೆ.

ಚೀನಾದ ಸೇನೆಯು ಗಡಿಭಾಗದಲ್ಲಿ ತನ್ನ ಸೇನೆಯ ಸಾಮಾನ್ಯ ಗಸ್ತು ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ಇದನ್ನು ಬೀಜಿಂಗ್‌ ನಿರಾಕರಿಸಿದೆ.

ಗಡಿ ಭಾಗದ ಅರಿವು ಭಾರತ ಸೇನೆಗೆ ಪೂರ್ಣವಾಗಿ ಇದೆ. ಪ್ರತಿಕೂಲ ಚಟುವಟಿಕೆಯಲ್ಲಿ ತೊಡಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.