
ಬೀಜಿಂಗ್, ಚೀನಾ: ವ್ಯೋಮನೌಕೆಯು ಅಂತರಿಕ್ಷದ ಅವಶೇಷಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಭೂಮಿಗೆ ಬರಲು ವಿಳಂಬವಾಗಿದ್ದ ಚೀನಾದ ಗಗನಯಾನಿಗಳು ಶುಕ್ರವಾರ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
‘ಶೆಂಝೌ-14 ಬಾಹ್ಯಾಕಾಶ ನೌಕೆಯ ಮೂಲಕ ಚೆನ್ ಡಾಂಗ್, ಚೆನ್ ಝೆಂಗುರಿ ಹಾಗೂ ವಾಂಗ್ ಜಿ ಅವರು ಉತ್ತರ ಚೀನಾದ ಡಾಂಗ್‌ಫೆಂಗ್ ನಿಲ್ದಾಣಕ್ಕೆ ಬಂದಿಳಿದರು’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ(ಸಿಎಂಎಸ್‌ಎ) ತಿಳಿಸಿದೆ.
‘ನವೆಂಬರ್ 5ರಂದೇ ಈ ಮೂವರು ಗಗನಯಾನಿಗಳು ಭೂಮಿಗೆ ಮರಳಬೇಕಿತ್ತು. ಅಂತರಿಕ್ಷದಲ್ಲಿ ವ್ಯೋಮನೌಕೆಗೆ ಕೊನೆಯ ಹಂತದಲ್ಲಿ ಅವಶೇಷಗಳು ಡಿಕ್ಕಿ ಹೊಡೆದಿದದ್ದರಿಂದ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ, ಪ್ರಯಾಣವನ್ನು ಮುಂದೂಡಲಾಗಿತ್ತು. ನಂತರ ಅವುಗಳನ್ನು ಸರಿಪಡಿಸಿದ ನಂತರ, ಅವರು ವ್ಯೋಮನೌಕೆಯಲ್ಲಿ ಬಂದಿಳಿದರು’ ಎಂದು ಸಿಎಂಎಸ್‌ಎ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
2011ರಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡಿದ ಬಳಿಕ ಇದೇ ಮೊದಲ ಬಾರಿ ಈ ಸಮಸ್ಯೆ ತಲೆದೋರಿತ್ತು. ಈ ನಿಲ್ದಾಣದಲ್ಲಿ ಮೂವರು ಗಗನಯಾನಿಗಳಿಗೆ ಏಕಕಾಲಕ್ಕೆ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಬೇರೆ ಗಗನಯಾನಿಗಳನ್ನು ಚೀನಾವು ಅಲ್ಲಿಗೆ ಕಳುಹಿಸಿಕೊಡುತ್ತದೆ.
‘ಭೂಮಿಗೆ ಬಂದಿಳಿದ ಎಲ್ಲ ಗಗನಯಾನಿಗಳು ಆರೋಗ್ಯವಂತರಾಗಿದ್ದಾರೆ. ಅವರು ಕಕ್ಷೆಯಲ್ಲಿ 204 ದಿನಗಳನ್ನು ಕಳೆದಿದ್ದರು. ಇದುವರೆಗೂ ದೀರ್ಘಕಾಲ ಕಕ್ಷೆಯಲ್ಲಿ ತಂಗಿದ ಚೀನಾದ ಗಗನಯಾನಿಗಳು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ’ ಎಂದು ಸಿಎಂಎಸ್‌ಎ ವಿವರಿಸಿದೆ.