ADVERTISEMENT

ದ್ವೀಪಗಳ ಬಳಿ ಡ್ರೋನ್‌ಗಳ ಹಾರಾಟ: ಎಚ್ಚರಿಕೆ ಸಂದೇಶ ರವಾನಿಸಿದ ತೈವಾನ್

ರಾಯಿಟರ್ಸ್
Published 6 ಆಗಸ್ಟ್ 2022, 6:58 IST
Last Updated 6 ಆಗಸ್ಟ್ 2022, 6:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತೈಪೆ: ಕಿನ್‌ಮೆನ್ ದ್ವೀಪದ ಬಳಿ ಏಳು ಡ್ರೋನ್‌ಗಳು ಹಾರಾಟ ನಡೆಸಿವೆ ಎಂದಿರುವ ತೈವಾನ್ ರಕ್ಷಣಾ ಸಚಿವಾಲಯ, ಪ್ರತಿ ದಾಳಿಯ ಎಚ್ಚರಿಕೆ ಸಂದೇಶ ರವಾನಿಸಿರುವುದಾಗಿ ತಿಳಿಸಿದೆ.

ಮಟ್ಸು ದ್ವೀಪದ ಬಳಿ ಅಪರಿಚಿತ ವಿಮಾನಗಳು ಹಾರಾಟ ನಡೆಸಿವೆ ಎಂದೂ ತೈವಾನ್ ಹೇಳಿದೆ.

ಚೀನಾ ಕರಾವಳಿಗೆ ಹೊಂದಿಕೊಂಡಿರುವ ಉಭಯ ದ್ವೀಪ ಪ್ರದೇಶಗಳಲ್ಲಿ ತನ್ನ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದೂ ತೈವಾನ್ ರಕ್ಷಣಾ ಸಚಿವಾಲಯ ಹೇಳಿದೆ.

ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರ ತೈವಾನ್‌ ಭೇಟಿಗೆ ಪ್ರತೀಕಾರವಾಗಿ ಚೀನಾ ಹಲವು ಕ್ರಮಗಳನ್ನು ಕೈಗೊಂಡಿತ್ತು. ತೈವಾನ್‌ ದ್ವೀಪ ಗುರಿಯಾಗಿಸಿ ಗುರುವಾರ 11 ಕ್ಷಿಪಣಿಗಳನ್ನು ಉಡಾಯಿಸಿತ್ತು. ತೈವಾನ್‌ ಬಳಿ ಅಣ್ವಸ್ತ್ರಸಜ್ಜಿತ ಜಲಾಂತರ್ಗಾಮಿ ನೌಕೆಯಿಂದಲೂ ಚೀನಾ ಸೇನೆ ತಾಲೀಮು ನಡೆಸಿತ್ತು. ಚೀನಾದ ಈ ಕ್ರಮಗಳ ವಿರುದ್ಧ ತೈವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯುದ್ಧೋನ್ಮತ್ತವಾಗಿರುವ ಚೀನಾ: ತೈವಾನ್ ಆರೋಪ

ಚೀನಾ ಸೇನೆಯು ಯದ್ಧೋನ್ಮತ್ತವಾಗಿ ವರ್ತಿಸುತ್ತಿದೆ ಎಂದು ತೈವಾನ್ ಆರೋಪಿಸಿದೆ. ಚೀನಾದ ಯುದ್ಧವಿಮಾನಗಳು ತೈವಾನ್ ಗಡಿ ದಾಟಿ ಸಮರ ತಾಲೀಮು ನಡೆಸಿವೆ. ಅದಕ್ಕೆ ಪ್ರತಿಯಾಗಿ ನಾವೂ ಎಚ್ಚರಿಕೆ ಸಂದೇಶ ರವಾನಿಸಿದ್ದೇವೆ ಎಂದು ತೈವಾನ್ ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.