ADVERTISEMENT

ಭಿನ್ನಮತೀಯರನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಿರುವ ಚೀನಾ! ಸ್ಪೋಟಕ ವರದಿ ಬಯಲಿಗೆ

ಏಜೆನ್ಸೀಸ್
Published 17 ಆಗಸ್ಟ್ 2022, 6:09 IST
Last Updated 17 ಆಗಸ್ಟ್ 2022, 6:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮ್ಯಾಡ್ರಿಡ್: ಕಮ್ಯುನಿಸ್ಟ್ ಆಡಳಿತದಲ್ಲಿ ತನ್ನ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುದಕ್ಕೆ ಬದ್ಧವಾಗಿರುವ ಚೀನಾ ಸರ್ಕಾರ ತನ್ನನ್ನು ಎದುರು ಹಾಕಿಕೊಳ್ಳುವವರಿಗೆ ಹೇಗೆಲ್ಲಾ ಚಿತ್ರಹಿಂಸೆ ಕೊಡುತ್ತದೆ ಎಂಬುದು ಅಪರೂಪಕ್ಕೆಂಬಂತೆ ಬಯಲಿಗೆ ಬರುತ್ತಿರುತ್ತದೆ.

ಏಕೆಂದರೆ, ಚೀನಾ ಸರ್ಕಾರದ ವಿರುದ್ಧ ಅಲ್ಲಿ ಯಾರೂ ಧ್ವನಿ ಎತ್ತುವಂತಿಲ್ಲ. ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಮಾತೇ ಅಂತಿಮ. ಸರ್ಕಾರದ ಪರ ಇರುವವರು ಇದನ್ನು ‘ಪ್ರಬಲ ಕಮ್ಯುನಿಸ್ಟ್ ಆಡಳಿತ’ ಎಂದು ಕರೆದರೆ, ಚೀನಾ ವಿರೋಧಿ ದೇಶಗಳು ಹಾಗೂ ಆ ದೇಶದಲ್ಲಿನ ಪ್ರಜಾಪ್ರಭುತ್ವ ಹೋರಾಟಗಾರರು ‘ಸರ್ವಾಧಿಕಾರ’ ಎಂದು ಕರೆಯುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲೂ ಅಲ್ಲೊಬ್ಬರು–ಇಲ್ಲೊಬ್ಬರು ಬಲಿಷ್ಠ ಸರ್ಕಾರದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಿರುತ್ತಾರೆ. ಇವರನ್ನು ಹತ್ತಿಕ್ಕಲು ಜಗತ್ತಿನ ಕಣ್ಣಿಗೆ ಮಣ್ಣೆರಚಿ ಚೀನಾ ತನ್ನದೇಯಾದ ಕ್ರಮಗಳನ್ನು ಅನುಸರಿಸುತ್ತದೆ.

ADVERTISEMENT

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಚೀನಾ ಸರ್ಕಾರ, ತನ್ನ ವಿರುದ್ಧ ಧ್ವನಿ ಎತ್ತುವವರನ್ನು, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರನ್ನು , ಪ್ರಜಾಪ್ರಭುತ್ವ ಹೋರಾಟಗಾರರನ್ನು ಹತ್ತಿಕ್ಕಲು ಹೊಸ ಮಾರ್ಗ ಕಂಡುಕೊಂಡಿದೆ.

ಸ್ಪೇನ್‌ನ ಮ್ಯಾಡ್ರಿಡ್ ಮೂಲದ ಸೇಫ್‌ಗಾರ್ಡ್ ಎಂಬ ಎನ್‌ಜಿಒ ಚೀನಾದ ಬಣ್ಣವನ್ನು ಕಳಚಿದೆ. ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಬಲವಂತವಾಗಿ ಅಲ್ಲಿನ ಹುಚ್ಚಾಸ್ಪತ್ರೆಗಳಿಗೆ ಅಟ್ಟುತ್ತಿದೆ ಎಂದು ಎನ್‌ಜಿಒ ವರದಿ ಹೇಳಿದೆ.

ರಾಜಕೀಯ ಕಾರಣಗಳಿಗಾಗಿ 2015 ರಿಂದ 2021 ರ ಅವಧಿಯಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ 99 ಪ್ರಮುಖ ಜನರನ್ನು ಚೀನಾ ಸರ್ಕಾರ ಹುಚ್ಚಾಸ್ಪತ್ರೆಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.

ಆಡಳಿತಾರೂಢ ಷಿ ಜಿನ್‌ಪಿಂಗ್‌ ಅವರ ಚೈನೀಸ್ ಕಮ್ಯುನಿಷ್ಟ್ ಪಾರ್ಟಿ (ಸಿಸಿಪಿ) ವಿಶೇಷವಾಗಿ ಕಾನೂನು ಸಂಘರ್ಷ ತಪ್ಪಿಸಲು 2022 ರಿಂದ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಚೀನಾದ ಮಾನವ ಹಕ್ಕುಗಳ ಹೋರಾಟಗಾರ್ತಿ ಲಿಯು ಪೇಯುಯಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಸಿಸಿಪಿಯು, ಹೋರಾಟಗಾರರನ್ನು ಬಲಿಪಶುಗಳನ್ನಾಗಿಸಲು ಬಲವಂತದ ಔಷಧ ಪ್ರಯೋಗ ಮಾಡಲು ಹುಚ್ಚಾಸ್ಪತ್ರೆಯ ವೈದ್ಯರಿಗೆ ಸೂಚಿಸಿದೆ ಎಂಬುದನ್ನು ವರದಿ ಹೇಳುತ್ತದೆ.

ಬಂಧಿತರು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಎಲೆಕ್ಟ್ರೋಶಾಕ್ ಥೆರಪಿ ಮತ್ತು ಕತ್ತಲ ಕೋಣೆ ಬಂಧನಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂದು ಕೈದಿಗಳ ಹೇಳಿಕೆಗಳನ್ನು ಲಿಯು ಪೇಯುಯಿ ಉಲ್ಲೇಖಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ಯುವತಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಭಾವಚಿತ್ರಕ್ಕೆ ಬಣ್ಣ ಎರಚಿದ್ದರು. ಮತ್ತೊಬ್ಬ ಟ್ವೀಟ್ ಮಾಡಿ ಸಿಸಿಪಿ ವಿರುದ್ಧ ಆರೋಪ ಮಾಡಿದ್ದ. ಇನ್ನೊಬ್ಬ ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ಆದ ಗಾಯಕ್ಕೆ ವೈದ್ಯಕೀಯ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಹಾಗೆಯೇ ಪ್ರಜಾಪ್ರಭುತ್ವ ಪರ ಕಾರ್ಯಕರ್ತ ಸಾಂಗ್ ಜೈಮಿನ್ ಕೂಡ ಹುಚ್ಚಾಸ್ಪತ್ರೆಯಲ್ಲಿ ಇದ್ದಾರೆ ಎಂದು ವರದಿ ಹೇಳಿದೆ.

ಇನ್ನೂ ವಿಚಿತ್ರವೆಂದರೆ ಹೀಗೆ ಜೈಲು ಸೇರಿ ಹೊರಬಂದವರನ್ನು ಸಾಮಾಜಿಕವಾಗಿಯೂ ಪ್ರತ್ಯೇಕವಾಗಿ ಇಡಲು ಅಲ್ಲಿನ ಸರ್ಕಾರ ಶ್ರಮಿಸುತ್ತಿದೆ.ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಕೆಲಸವನ್ನು ಷಿ ಜಿನ್‌ಪಿಂಗ್‌ ಅವರು ಕಳೆದ ಒಂದು ದಶಕದಿಂದ ಅತ್ಯಂತ ನಿಷ್ಣಾತವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಎಎಫ್‌ಪಿ ಸುದ್ದಿಸಂಸ್ಥೆಯು, ಸಿಸಿಪಿ ವಕ್ತಾರರನ್ನು ಹಾಗೂ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.