ADVERTISEMENT

ಚೀನಾದ 80ನೇ ವಿಜಯೋತ್ಸವ ಸಂಸ್ಮರಣಾ ದಿನ: ಪುಟಿನ್‌, ಕಿಮ್‌ ಜಾಂಗ್‌ ಉನ್ ಭಾಗಿ

ಪಿಟಿಐ
Published 28 ಆಗಸ್ಟ್ 2025, 14:29 IST
Last Updated 28 ಆಗಸ್ಟ್ 2025, 14:29 IST
ವ್ಲಾದಿಮಿರ್ ಪುಟಿನ್
ವ್ಲಾದಿಮಿರ್ ಪುಟಿನ್   

ಬೀಜಿಂಗ್: ಸೆಪ್ಟೆಂಬರ್‌ 3ರಂದು ನಡೆಯುವ ಚೀನಾದ 80ನೇ ವಿಜಯೋತ್ಸವ ಸಂಸ್ಮರಣಾ ದಿನದ ಪಥಸಂಚಲನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್ ಸೇರಿದಂತೆ 26 ರಾಷ್ಟ್ರಗಳ ನಾಯಕರು ಸಾಕ್ಷಿಯಾಗಲಿದ್ದಾರೆ ಎಂದು ಚೀನಾ ಗುರುವಾರ ತಿಳಿಸಿದೆ.

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಜಪಾನ್‌ ವಿರುದ್ಧ ಮೇಲುಗೈ ಸಾಧಿಸಿದ ದಿನವನ್ನು ವಿಜಯೋತ್ಸವವಾಗಿ ಚೀನಾ ಆಚರಿಸುತ್ತಿದೆ. ವಿಜಯೋತ್ಸವದಿಂದ ಅಂತರ ಕಾಯ್ದುಕೊಳ್ಳುವಂತೆ ಜಪಾನ್‌ ವಿಶ್ವ ನಾಯಕರಲ್ಲಿ ಮನವಿ ಮಾಡಿಕೊಂಡಿತ್ತು. ಜಪಾನ್‌ನ ಈ ಕೋರಿಕೆಗೆ ಚೀನಾ ಪ್ರಬಲವಾದ ರಾಜತಾಂತ್ರಿಕ ಪ್ರತಿಭಟನೆಯನ್ನೂ ವ್ಯಕ್ತಪಡಿಸಿತ್ತು.

ಬೀಜಿಂಗ್‌ನಲ್ಲಿ ನಡೆಯುವ ವಿಜಯೋತ್ಸವಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಆಹ್ವಾನದ ಮೇರೆಗೆ ಜಗತ್ತಿನ 26 ರಾಷ್ಟ್ರಗಳ ನಾಯಕರು ಆಗಮಿಸುತ್ತಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಹಾಂಗ್ ಲೀ ಗುರುವಾರ ತಿಳಿಸಿದ್ದಾರೆ. 

ADVERTISEMENT

ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 1ರವರೆಗೆ ಬೀಜಿಂಗ್‌ ಸಮೀಪವೇ ಇರುವ ಟಿಯಾನ್‌ಜಿನ್‌ ನಗರದಲ್ಲಿ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ಶೃಂಗಸಭೆ ಜರುಗಲಿದೆ. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 20 ದೇಶಗಳ ನಾಯಕರು, 10 ಜಾಗತಿಕ ಸಂಸ್ಥೆಗಳ ಪ್ರಮುಖರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ಚೀನಾ ಸಚಿವ ಲಿಯು ಬಿನ್‌ ತಿಳಿಸಿದ್ದಾರೆ.

ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಹಲವು ದೇಶಗಳ ನಾಯಕರನ್ನು ವಿಜಯೋತ್ಸವ ಪರೇಡ್‌ನಲ್ಲೂ ಭಾಗವಹಿಸುವಂತೆ ಚೀನಾ ಮನವಿ ಮಾಡುತ್ತಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಮಾಲ್ಡೀವ್ಸ್‌ ಅಧ್ಯಕ್ಷ ಮಹಮದ್ ಮುಯಿಝು ಅವರೂ ಎಸ್‌ಸಿಒ ಶೃಂಗದಲ್ಲಿ ಭಾಗಿಯಾಗಲಿದ್ದಾರೆ.

ಕಿಮ್ ಜಾಂಗ್ ಉನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.