ADVERTISEMENT

ಅಮೆರಿಕ ವಾಯುಪ್ರದೇಶದಲ್ಲಿ 3 ಬಸ್ ಗಾತ್ರದ ಚೀನಾ ಬಲೂನ್: ಬ್ಲಿಂಕೆನ್ ಪ್ರವಾಸ ರದ್ದು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:52 IST
Last Updated 4 ಫೆಬ್ರುವರಿ 2023, 5:52 IST
ಅಮೆರಿಕದ ವಾಯು ಪ್ರದೇಶದಲ್ಲಿ ಕಾಣಿಸಿದ್ದ ಶಂಕಿತ ಬೇಹುಗಾರಿಕೆಯ ಚೀನಿ ಬಲೂನು  –ಎಎಫ್‌ಪಿ ಚಿತ್ರ
ಅಮೆರಿಕದ ವಾಯು ಪ್ರದೇಶದಲ್ಲಿ ಕಾಣಿಸಿದ್ದ ಶಂಕಿತ ಬೇಹುಗಾರಿಕೆಯ ಚೀನಿ ಬಲೂನು –ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಅಮೆರಿಕದ ವಾಯು ಪ್ರದೇಶದಲ್ಲಿ ಪತ್ತೆಯಾಗಿರುವ 3 ಬಸ್ ಗಾತ್ರದ ಚೀನಿ ಬೇಹುಗಾರಿಕಾ ಬಲೂನು ಇನ್ನೂ ಕೆಲ ದಿನಗಳವರೆಗೆ ಹಾರಾಟ ನಡೆಸಲಿದೆ ಎಂದು ಪೆಂಟಗನ್‌ ಹೇಳಿದೆ.

ಈ ಬೆಳವಣಿಗೆಯು ಅಮೆರಿಕದ ತೀವ್ರ ಕೋಪಕ್ಕೆ ಕಾರಣವಾಗಿದ್ದು, ಪ್ರತಿಭಟನಾರ್ಥವಾಗಿ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರ ಚೀನಾ ಪ್ರವಾಸವನ್ನು ರದ್ದುಪಡಿಸಲಾಗಿದೆ. ಶುಕ್ರವಾರ, ಬ್ಲಿಂಕೆನ್ ಚೀನಾಗೆ ತೆರಳಬೇಕಿತ್ತು. ಕಳೆದ ಹಲವು ವರ್ಷಗಳಿಂದ ಚೀನಾಗೆ ಅಮೆರಿಕದ ಉನ್ನತ ರಾಜತಾಂತ್ರಿಕರ ಭೇಟಿ ಇದಾಗಬೇಕಿತ್ತು.

ಚೀನಾವು ಅಮೆರಿಕದ ವಾಯು ಪ್ರದೇಶವನ್ನು ಅತಿಕ್ರಮಿಸಿರುವ ಕುರಿತಂತೆ ಅಧ್ಯಕ್ಷ ಜೋ ಬೈಡನ್ ಅವರಿಗೆ ವಿವರಣೆ ನೀಡಲಾಗಿದ್ದು, ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಲಾಗುತ್ತಿದೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬಲೂನ್ ಅನ್ನು ಹೊಡೆದುರುಳಿಸಿಲ್ಲ. ಎಲ್ಲ ರೀತಿಯ ಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿರುವುದಾಗಿ ಅದು ಹೇಳಿದೆ.

ADVERTISEMENT

‘ನಾವು ಈ ಬಗ್ಗೆ ನಿಗಾ ಇಟ್ಟಿದ್ದೇವೆ. ಮುಂದಿನ ಕೆಲ ದಿನಗಳ ಕಾಲ ಅದು ಅಮೆರಿಕದ ವಾಯುಪ್ರದೇಶದಲ್ಲಿ ಇರುವ ಸಾಧ್ಯತೆ ಇದೆ. ನಾವು ನಮ್ಮ ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುವುದನ್ನು ಮುಂದುವರಿಸಿದ್ದೇವೆ’ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಪ್ಯಾಟ್ ರೈಡರ್ ಹೇಳಿದ್ದಾರೆ.

‘ಈ ಬಲೂನ್ ಕಣ್ಗಾವಲು ಉಪಕರಣದ ಜೊತೆಗೆ ಅಧಿಕ ಭಾರದ ವಸ್ತುಗಳನ್ನು ಒಳಗೊಂಡಿದೆ. ಕಣ್ಗಾವಲು ಬಲೂನ್ ವಿವಿಧ ಸಾಮರ್ಥ್ಯಗಳನ್ನು ಹೊಂದಿದೆ. ಸದ್ಯ ಅದು ಅಮೆರಿಕದ ಪೂರ್ವ ಭಾಗಕ್ಕೆ ಚಲಿಸುತ್ತಿದೆ. ಪ್ರಸ್ತುತ ಅದು ಮಧ್ಯ ಅಮೆರಿಕದಲ್ಲಿ ಇದೆ’ಎಂದು ಅವರು ಹೇಳಿದ್ದಾರೆ.

‘ಈ ಕುರಿತಂತೆ ಚೀನಾ ವಿಷಾದ ವ್ಯಕ್ತಪಡಿಸಿರುವುದನ್ನು ಅಮೆರಿಕ ಗಮನಿಸಿದೆ. ಅಮೆರಿಕದ ವಾಯುಪ್ರದೇಶದಲ್ಲಿ ಚೀನಾ ಬಲೂನ್ ಹಾರಾಟವು ನಮ್ಮ ಸಾರ್ವಭೌಮತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘೆನೆಯಾಗಿದ್ದು, ಸ್ವೀಕಾರಾರ್ಹವಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಹೇಳಿದ್ದಾರೆ.

ಈ ಬೂಲೂನಿನಿಂದ ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಶ್ವೇತಭವನ ಮತ್ತು ಪೆಂಟಗನ್ ಹೇಳಿದೆ. ‘ಈ ಬಗ್ಗೆ ಅಧ್ಯಕ್ಷ ಬೈಡನ್ ಅವರಿಗೆ ವಿವರಿಸಲಾಗಿದೆ. ಈ ಕುರಿತ ಕ್ರಮಕ್ಕೆ ಇರುವ ಆಯ್ಕೆಗಳನ್ನು ಪ್ರಸ್ತುತಪಡಿಸಲು ಅವರು ಕೇಳಿದ್ದಾರೆ’ಎಂದು ಜೀನ್ ಪಿಯರ್ ಹೇಳಿದ್ದಾರೆ.

‘ಇದು ಕಣ್ಗಾವಲು ಬಲೂನ್ ಎಂದು ನಮಗೆ ತಿಳಿದಿದೆ. ಇದು ಸಾಕಷ್ಟು ದೊಡ್ಡದಾಗಿದೆ ಎಂಬುದನ್ನು ಹೊರತುಪಡಿಸಿ ಅದರ ನಿರ್ದಿಷ್ಟ ಮಾಹಿತಿ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ, ಅದರ ಅವಶೇಷಗಳನ್ನು ಪರೀಕ್ಷೆಗೆ ಒಳಪಡಿಸಿದರೆ ಮಾಹಿತಿ ಸಿಗಬಹುದು. ಆದರೆ, ಅದನ್ನು ಹೊಡೆದುರುಳಿಸಿದರೆ ಹಲವರಿಗೆ ಗಾಯ, ಸಾವು ಮತ್ತು ಆಸ್ತಿ ಹಾನಿಗೆ ಕಾರಣವಾಗಬಹುದು’ ಎಂದು ರೈಡರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.