ADVERTISEMENT

ಸಮುದ್ರದಲ್ಲಿ ಚೀನಾ ಪ್ರಜೆ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್: ಚೀನಾ ಶ್ಲಾಘನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2023, 4:00 IST
Last Updated 18 ಆಗಸ್ಟ್ 2023, 4:00 IST
ಚೀನಾದ ಪ್ರಜೆ ಯಿನ್‌ ವೆಗ್ಯಾಂಗ್‌
ಚೀನಾದ ಪ್ರಜೆ ಯಿನ್‌ ವೆಗ್ಯಾಂಗ್‌   –ಪಿಟಿಐ ಚಿತ್ರ

ಬೀಜಿಂಗ್: ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದ ಚೀನಾದ ಪ್ರಜೆಯನ್ನು ರಕ್ಷಣೆ ಮಾಡಿದ ಭಾರತೀಯ ಕೋಸ್ಟ್ ಗಾರ್ಡ್ ಕಾರ್ಯಕ್ಕೆ ಚೀನಾ ರಾಯಭಾರ ಕಚೇರಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಅರಬ್ಬಿ ಸಮುದ್ರದಲ್ಲಿ ಚೀನಾ ಪ್ರಜೆಯನ್ನು ಸಮಯೋಚಿತ ಮತ್ತು ಚಿಕಿತ್ಸೆಗಾಗಿ ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಭಾರತ ಕೋಸ್ಟ್ ಗಾರ್ಡ್‌ಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ (ಟ್ವಿಟರ್) ಬರೆದುಕೊಂಡಿದೆ.

ಇತ್ತೀಚೆಗೆ ಮುಂಬೈನಿಂದ 200 ಕಿ.ಮೀ.ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದ್ದ ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಚೀನಾದ ಪ್ರಜೆಯೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವು ನೀಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿತ್ತು.

ADVERTISEMENT

ಆಗಸ್ಟ್ 16–17ರ ನಡುವಿನ ಮಧ್ಯರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಚೀನಾದಿಂದ ಯುಎಇಗೆ ತೆರಳುತ್ತಿದ್ದ ಎಂ.ವಿ.ಡೊಂಗ್ ಫಾಂಗ್‌ಕನ್ ಟನ್‌ ನಂ. 2 ಹಡಗಿನಲ್ಲಿದ್ದ ಚೀನಾದ ಪ್ರಜೆ ಯಿನ್‌ ವೆಗ್ಯಾಂಗ್‌ ಅವರಿಗೆ ಹೃದಯಾಘಾತವಾಗಿತ್ತು. ಮಾಹಿತಿ ಸಿಕ್ಕಿದ ಕೂಡಲೇ ಪ್ರತಿಕೂಲ ವಾತಾವರಣದಲ್ಲಿಯೂ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಕಾವಲು ಪಡೆ ತಿಳಿಸಿತ್ತು.

ರೋಗಿಯನ್ನು ಎಂಕೆ–III ವಿಮಾನ ಬಳಸಿ ಕರೆತಂದಿದ್ದು, ಪ್ರಾಥಮಿಕ ಚಿಕಿತ್ಸೆ ಒದಗಿಸಲಾಯಿತು. ಚೇತರಿಕೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಡಗಿನ ಮೇಲ್ವಿಚಾರಕರಿಗೆ ಒಪ್ಪಿಸಲಾಯಿತು. ಇದು, ಕಾವಲು ಪಡೆಯ ಬದ್ಧತೆಗೆ ನಿದರ್ಶನವಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.