ADVERTISEMENT

20ರಿಂದ ಷಿ ಜಿನ್‌ಪಿಂಗ್ ರಷ್ಯಾ ಭೇಟಿ: ಉಕ್ರೇನ್ ಯುದ್ಧ ನಿಲ್ಲಿಸಲು ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 12:40 IST
Last Updated 17 ಮಾರ್ಚ್ 2023, 12:40 IST
.
.   

ಬೀಜಿಂಗ್‌: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸೋಮವಾರ ರಷ್ಯಾಕ್ಕೆ ಪ್ರಯಾಣಿಸಲಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಉಕ್ರೇನ್‌ ಯುದ್ಧ ಕುರಿತು ನಿರ್ಣಾಯಕ ಶಾಂತಿ ಮಾತುಕತೆ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

‘ಪುಟಿನ್ ಅವರ ಆಹ್ವಾನದ ಮೇರೆಗೆ ಷಿ ಜಿನ್‌ಪಿಂಗ್ ಇದೇ 20ರಿಂದ 22 ರವರೆಗೆ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ತಿಳಿಸಿದ್ದಾರೆ.

ಉಕ್ರೇನ್‌ನೊಂದಿಗಿನ ಯುದ್ಧ ಕೊನೆಗೊಳಿಸಿ, ಶಾಂತಿ ಮಾತುಕತೆ ನಡೆಸಲು ಪುಟಿನ್‌ ಅವರಿಗೆ ಜಿನ್‌ಪಿಂಗ್ ಸಲಹೆ ನೀಡುವ ಸಾಧ್ಯತೆ ಇದೆ. ಈ ವೇಳೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರೊಂದಿಗೆ ದೂರವಾಣಿಯಲ್ಲಿ ಜಿನ್‌ಪಿಂಗ್‌ ಮಾತುಕತೆ ನಡೆಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ADVERTISEMENT

ಈ ತಿಂಗಳ ಆರಂಭದಲ್ಲಿ ದೇಶದ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥರಾಗಿ ಐದು ವರ್ಷಗಳ ಅವಧಿಗೆ ಸತತ ಮೂರನೇ ಬಾರಿ ಆಯ್ಕೆಯಾದ ನಂತರ ಜಿನ್‌ಪಿಂಗ್‌ ಅವರು ಕೈಗೊಳ್ಳಲಿರುವ ಮೊದಲ ವಿದೇಶಿ ಪ್ರವಾಸ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.