ADVERTISEMENT

ಕಿಡ್ನಿಗಾಗಿ ಕ್ಯಾನ್ಸರ್ ರೋಗಿ ಜೊತೆ ವಿವಾಹ! ಚೀನಾದಲ್ಲೊಂದು ಸ್ಫೂರ್ತಿಯ ಪ್ರೇಮಕಥೆ

ಡೆಕ್ಕನ್ ಹೆರಾಲ್ಡ್
Published 29 ಅಕ್ಟೋಬರ್ 2025, 13:46 IST
Last Updated 29 ಅಕ್ಟೋಬರ್ 2025, 13:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: ಐಸ್ಟಾಕ್‌

ಬದುಕಿಗಾಗಿನ ಹೋರಾಟ ಎಂತಹ ಸಾಹಸವನ್ನಾದರೂ ಮಾಡುವ ಛಲ, ಧೈರ್ಯ ತುಂಬುತ್ತದೆ ಎಂಬುದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಯುರೇಮಿಯಾ ಕಾಯಿಲೆಯಿಂದ (ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಯಿಂದ) ಬಳಲುತ್ತಿದ್ದ ಯುವತಿ, ಕ್ಯಾನ್ಸರ್‌ ಪೀಡಿತ ವ್ಯಕ್ತಿ – ಇಬ್ಬರೂ ಒಪ್ಪಂದದ ಮೇರೆಗೆ ವಿವಾಹವಾಗಿ ಒಟ್ಟಿಗೆ ಅನಾರೋಗ್ಯದ ವಿರುದ್ಧ ಗೆದ್ದು ಮಾದರಿಯಾಗಿದ್ದಾರೆ.

ADVERTISEMENT

ಇದೆಲ್ಲ ಆರಂಭವಾದದ್ದು 2013ರಲ್ಲಿ.

ಯುರೇಮಿಯಾದಿಂದ ಬಳಲುತ್ತಿದ್ದ ವಾಂಗ್‌ ಷಿಯಾವೊ (24) ಅವರು, ತುರ್ತಾಗಿ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವರು ಹೆಚ್ಚುದಿನ ಬದುಕುವುದಿಲ್ಲ ಎನ್ನಲಾಗಿತ್ತು. ತಮ್ಮ ಸಂಬಂಧಿಕರು, ಸ್ನೇಹಿತರ ಪಟ್ಟಿಯಲ್ಲಿ ಅವರಿಗೆ ಸರಿಹೊಂದುವ ದಾನಿ ಇರಲಿಲ್ಲವಾದ್ದರಿಂದ ವಾಂಗ್‌, ದಾನಿಗಾಗಿ ಹುಡುಕಾಟ ನಡೆಸಿದ್ದರು. 

ಕ್ಯಾನ್ಸರ್‌ ಕಾಯಿಲೆಯುಳ್ಳವರ ಗುಂಪಿನಲ್ಲಿ ಹಂಚಿಕೊಳ್ಳಲಾಗಿದ್ದ ಮದುವೆ ಕುರಿತಾದ ಜಾಹೀರಾತೊಂದನ್ನು, ತಮ್ಮಂತೆಯೇ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತೊಬ್ಬರು ವಾಂಗ್‌ಗೆ ತೋರಿದ್ದರು.

ಆ ಜಾಹೀರಾತಿನಲ್ಲಿ, ಕ್ಯಾನ್ಸರ್‌ ಇದ್ದ 27 ವರ್ಷದ ಯು ಜಿಯಾನ್‌ಪಿಂಗ್‌ ಎಂಬವರು, ತಾವು ಮದುವೆಯಾಗಲು ಬಯಸುತ್ತಿರುವುದಾಗಿ ಹಾಗೂ ಸಾವಿನ ನಂತರ ಮೂತ್ರಪಿಂಡ ದಾನ ಮಾಡುವುದಾಗಿ ಪ್ರಕಟಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವಾಂಗ್‌, 'ಮದುವೆಯ ನಂತರ ನಾನು ನಿಮ್ಮನ್ನು ಸಾಧ್ಯವಾದಷ್ಟು ಚೆನ್ನಾಗಿ ನೋಡಿಕೊಳ್ಳುವೆ. ದಯವಿಟ್ಟು ನನ್ನನ್ನು ಕ್ಷಮಿಸಿ; ನಾನು ಬದುಕಲು ಬಯಸುತ್ತಿದ್ದೇನೆ' ಎಂದು ತಿಳಿಸಿದ್ದರು. ಆ ಮೂಲಕ, ಕಿಡ್ನಿ ದಾನ ಮಾಡುವಂತೆ ಕೋರಿದ್ದರು ಎಂಬುದಾಗಿ 'ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌' ವರದಿ ಮಾಡಿದೆ.

ರಕ್ತದ ಕ್ಯಾನ್ಸರ್‌ 'ಮ್ಯೆಲೊಮಾ'ದಿಂದ ಬಳಲುತ್ತಿದ್ದ ಜಿಯಾನ್‌ಪಿಂಗ್‌ ಅವರು ವಾಂಗ್‌ಗೆ ಕೂಡಲೇ ಪ್ರತಿಕ್ರಿಯೆ ನೀಡಿದ್ದರು.

ಇಬ್ಬರ ರಕ್ತದ ಗುಂಪುಗಳು ಹೋಲಿಕೆಯಾದವು. ಚಿಕಿತ್ಸೆಯ ಸಂದರ್ಭದಲ್ಲಿ ಜಿಯಾನ್‌ಪಿಂಗ್‌ ಅವರನ್ನು ಹಾಗೂ ಸಾವಿನ ನಂತರ ಅವರ (ಜಿಯಾನ್‌ಪಿಂಗ್‌) ತಂದೆಯನ್ನು ವಾಂಗ್‌ ಅವರು ನೋಡಿಕೊಳ್ಳುವಂತೆ ಮತ್ತು ಅದೇರೀತಿ, ನಿಧನದ ಬಳಿಕ ವಾಂಗ್‌ ಅವರಿಗೆ ಜಿಯಾನ್‌ಪಿಂಗ್‌ ಮೂತ್ರಪಿಂಡ ದಾನ ಮಾಡುವಂತೆ ಒಪ್ಪಂದ ಕೈಗೊಂಡು, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.

ನಿತ್ಯವೂ ಅವರಿಬ್ಬರ ನಡುವೆ ನಡೆಯುತ್ತಿದ್ದ ಮಾತುಕತೆಗಳು, ಒಬ್ಬರಿಗೊಬ್ಬರು ತೋರುತ್ತಿದ್ದ ಕಾಳಜಿಯು ಪರಸ್ಪರರಲ್ಲಿ ಪ್ರೀತಿ ಮೂಡಿಸಿತು.

ದಿನ ಕಳೆದಂತೆ ಜಿಯಾನ್‌ಪಿಂಗ್‌ ಅವರಿಗೆ ತಾವು ಚೇತರಿಸಿಕೊಳ್ಳುತ್ತಿರುವಂತೆ ಅನ್ನಿಸತೊಡಗಿತು. ವಾಂಗ್‌ ಅವರ ಜೀವವನ್ನೂ ಉಳಿಸುವ ನಿರ್ಧಾರ ಮಾಡಿದರು. ಹಾಗೆಯೇ, ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿಗಾಗಿ ಹಣ ಹೊಂದಿಸಲು ರಸ್ತೆ ಬದಿ ಹೂ, ಹೂಗುಚ್ಛ ಮಾರಾಟ ಆರಂಭಿಸಿದರು. ವಾಂಗ್‌ ಕೂಡ, ತಮ್ಮ ಕಥೆಯನ್ನು ಹೇಳುವ ಕಾರ್ಡ್‌ಗಳನ್ನು ಹೂಗಳ ಪಕ್ಕ ಇಡಲಾರಂಭಿಸಿದರು. ಇದರಿಂದ ವ್ಯಾಪಾರ ಕುದುರಿತು.

ಚೆನ್ನಾಗಿ ವ್ಯಾಪಾರ ನಡೆದ ಕಾರಣ ವಾಂಗ್‌, ಸುಮಾರು 5 ಲಕ್ಷ ಯುವಾನ್ (ಅಂದಾಜು ₹ 61 ಲಕ್ಷ) ಉಳಿಸಿದರು. ಜಿಯಾನ್‌ಪಿಂಗ್‌ ಚಿಕಿತ್ಸೆಗೆ ಅಷ್ಟು ಸಾಕಾಯಿತು.

ಜಿಯಾನ್‌ಪಿಂಗ್‌ ಅವರ ಆರೋಗ್ಯ ಸ್ಥಿರಗೊಳ್ಳುತ್ತಾ ಸಾಗಿದಂತೆ, ವಾಂಗ್ ಅವರ ಆರೋಗ್ಯವೂ ಪವಾಡದ ರೀತಿ ಸುಧಾರಿಸಿತು. ಅವರಿಗೆ ಇನ್ನು ಮೂತ್ರಪಿಂಡ ಕಸಿಯ ಅಗತ್ಯವಿಲ್ಲ ಎಂಬುದಾಗಿ ವೈದ್ಯರೂ ಖಚಿತಪಡಿಸಿದರು.

ಸದ್ಯ ಹೂವಿನಂಗಡಿ ಇಟ್ಟುಕೊಂಡಿರುವ ಈ ಜೋಡಿ, ಒಟ್ಟಾಗಿ ಆರೋಗ್ಯಯುತ ಜೀವನ ನಡೆಸುತ್ತಿದೆ.

ಇವರಿಬ್ಬರ ಕಥೆ ಆಧರಿಸಿದ 'ವಿವಾ ಲಾ ವಿಡಾ' ಹೆಸರಿನ ಸಿನಿಮಾ 2024ರಲ್ಲಿ ತೆರೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.