ADVERTISEMENT

ಟ್ರಂಪ್ ಕೋಪದ ನಿರ್ವಹಣೆ ಬಗ್ಗೆ ಗ್ರೇತಾ ಪಾಠ; ವರ್ಷದ ಹಿಂದಿನ ಟ್ವೀಟ್‌ಗೆ ಈಗ ಅಣಕ!

ಏಜೆನ್ಸೀಸ್
Published 6 ನವೆಂಬರ್ 2020, 14:20 IST
Last Updated 6 ನವೆಂಬರ್ 2020, 14:20 IST
ಸ್ವೀಡನ್ನಿನ ಗ್ರೇತಾ ಥುನ್‍ಬರ್ಗ್
ಸ್ವೀಡನ್ನಿನ ಗ್ರೇತಾ ಥುನ್‍ಬರ್ಗ್   

ಸ್ಟಾಕ್‌ಹೋಮ್: ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುತ್ತಿರುವ ಸ್ವೀಡನ್ನಿನ ಗ್ರೇತಾ ಥುನ್‍ಬರ್ಗ್ ಗುರುವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಟ್ವೀಟ್ ಟಾಂಟ್ ಕೊಟ್ಟಿದ್ದಾರೆ. ಕಳೆದ ವರ್ಷ ಟ್ರಂಪ್‌ ಮಾಡಿದ್ದ ಟ್ವೀಟನ್ನೇ ತಿರುಗು ಬಾಣವಾಗಿಸಿ ಗ್ರೇತಾ ಮಾಡಿರುವ ಟ್ವೀಟ್ ಸುದ್ದಿಯಾಗಿದೆ.

ಡೊನಾಲ್ಡ್ ಟ್ರಂಪ್‌ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಿಲ್ಲಿಸುವಂತೆ ಗುರುವಾರ ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ಅಂಚೆ ಮತಗಳು ಬೈಡನ್‌ ಅವರಿಗೆ ಮುನ್ನಡೆ ತಂದು ಕೊಟ್ಟಿದ್ದಂತೆ ಕುಪಿತರಾಗಿ ಟ್ರಂಪ್‌ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ 17 ವರ್ಷ ವಯಸ್ಸಿನ ಗ್ರೇತಾ, 'ಇದೆಂಥ ಹಾಸ್ಯಾಸ್ಪದ. ಕೋಪದ ನಿರ್ವಹಣೆ ಸಮಸ್ಯೆಯ ಬಗ್ಗೆ ಡೊನಾಲ್ಡ್‌ ಗಮನಿಸಬೇಕಿದೆ, ಹಾಗಾದರೆ ಸ್ನೇಹಿತರೊಂದಿಗೆ ಒಳ್ಳೆಯ ಹಳೇ ಸಿನಿಮಾ ನೋಡಲು ಹೋಗಿ! ಚಿಲ್‌ ಡೊನಾಲ್ಡ್‌, ಚಿಲ್‌!' ಎಂದು ಮೂದಲಿಸಿದ್ದಾರೆ.

ಈ ಟ್ವೀಟ್‌ಗೆ ಈವರೆಗೂ 15 ಲಕ್ಷಕ್ಕೂ ಹೆಚ್ಚು ಬಾರಿ ಮೆಚ್ಚುಗೆ ವ್ಯಕ್ತವಾಗಿದ್ದು, 3.88 ಲಕ್ಷಕ್ಕೂ ಅಧಿಕ ಬಾರಿ ರಿಟ್ವೀಟ್‌ ಮಾಡಿಕೊಳ್ಳಲಾಗಿದೆ.

ADVERTISEMENT

ಕಳೆದ ವರ್ಷ ಗ್ರೇತಾ 'ಟೈಮ್‌' ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು. ಆದರೆ, ಆ ಆಯ್ಕೆಗೆ ಅಣಕವಾಡಿದ್ದ ಡೊನಾಲ್ಡ್‌ ಟ್ರಂಪ್‌, 'ಇದು ಹಾಸ್ಯಾಸ್ಪದ. ಗ್ರೇತಾ ತನ್ನ ಕೋಪದ ಸಮಸ್ಯೆ ನಿರ್ವಹಣೆಗೆ ಒತ್ತು ನೀಡಬೇಕು. ಸ್ನೇಹಿತರೊಂದಿಗೆ ಉತ್ತಮ ಸಿನಿಮಾ ನೋಡಬೇಕು. ಚಿಲ್‌ ಗ್ರೇತಾ, ಚಿಲ್‌!' ಎಂದು ಟ್ವೀಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.