ADVERTISEMENT

ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: ಹಣ್ಣು, ಬೇರು ತಿಂದು ಬದುಕಿದ್ದ ಮಕ್ಕಳು

ಎಎಫ್‌ಪಿ
Published 11 ಜೂನ್ 2023, 16:10 IST
Last Updated 11 ಜೂನ್ 2023, 16:10 IST
   

ಬೊಗೋಟಾ: ಅಮೆಜಾನ್‌ ದಟ್ಟ ಕಾಡಿನಲ್ಲಿ 40 ದಿನಗಳ ಬಳಿಕ ಪತ್ತೆಯಾದ ನಾಲ್ವರು ಮಕ್ಕಳಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಮಕ್ಕಳು ಬಳಲಿದ್ದಾರೆ. ಆದರೆ ಖುಷಿಯಾಗಿದ್ದಾರೆ. ಆಟವಾಡಲು ಬಯಸುತ್ತಿದ್ದಾರೆ. ಓದಲು ಪುಸ್ತಕಗಳನ್ನು ನೀಡುವಂತೆ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳು ಕಾಡಿನಲ್ಲಿ ಸೇವಿಸಲು ಯೋಗ್ಯವಾದ ಬೀಜಗಳು, ಹಣ್ಣುಗಳು ಮತ್ತು ಬೇರನ್ನು ತಿಂದು ಬದುಕಿದ್ದಾರೆ. ಅದರ ಜೊತೆಗೆ ರಕ್ಷಣಾ ಪಡೆಗಳು ಹೆಲಿಕಾಪ್ಟರ್‌ ಮೂಲಕ ಅನೇಕ ಕಡೆ ಬೀಳಿಸಿದ್ದ ಆಹಾರವನ್ನೂ ಸೇವಿಸಿದ್ದಾರೆ ಎಂದು ಕೊಲಂಬಿಯಾದ ಆದಿವಾಸಿ ಜನರ ರಾಷ್ಟ್ರೀಯ ಸಂಸ್ಥೆ (ಒಪಿಐಎಸಿ) ಹೇಳಿದೆ.

ADVERTISEMENT

ಮೇ 1ರಂದು ಲಘು ವಿಮಾನ ಅಪಘಾತಕ್ಕೀಡಾದ ಕಾರಣ ಮಕ್ಕಳು ಕಾಡಿನಲ್ಲಿ ನಾಪತ್ತೆಯಾಗಿದ್ದರು. ಸೈನಿಕರು ಮತ್ತು ಸ್ವಯಂ ಸೇವಕರ ತಂಡವು ಶುಕ್ರವಾರ ಅವರನ್ನು ಪತ್ತೆ ಮಾಡಿ ಕಾಡಿನಿಂದ ಹೊರತಂದಿತ್ತು.

ಮಕ್ಕಳೆಲ್ಲರೂ ಒಡಹುಟ್ಟಿದವರಾಗದ್ದು, 1 ವರ್ಷದಿಂದ 13 ವರ್ಷದೊಳಗಿನ ವಯೋಮಾನದವರಾಗಿದ್ದಾರೆ. 13 ವರ್ಷ ವಯಸ್ಸಿನ ಬಾಲಕಿಯ ಕಾಳಜಿ ಮತ್ತು ಕಾಡಿನ ಜ್ಞಾನದಿಂದ ಮಕ್ಕಳು ಬದಕುಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‌‘ಮಕ್ಕಳಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ಘನಾಹಾರ ನೀಡಲಾಗುತ್ತಿಲ್ಲ. 2–3 ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದು ಕೊಲಂಬಿಯ ರಕ್ಷಣಾ ಸಚಿವ ಇವಾನ್ ವೆಲಸ್‌ಕ್ವೀಸ್‌ ತಿಳಿಸಿದ್ದಾರೆ.

ಕೊಲಂಬಿಯಾ ಅಧ್ಯಕ್ಷ  ಗಸ್ಟೊವೊ ಪೆಟ್ರೊ ಮತ್ತು ಅವರ ಕುಟುಂಬ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

‘ದಟ್ಟ ಕಾಡಿನಲ್ಲಿ ನಾಲ್ವರು ಮಕ್ಕಳು ಬದುಕುಳಿದಿದ್ದಕ್ಕೆ ಅವರಿಗೆ ಸ್ಥಳೀಯ ಪರಿಸರದ ಕುರಿತು ಇದ್ದ ಜ್ಞಾನ ಮತ್ತು ಪರಿಸರದ ಜೊತೆಗಿದ್ದ ಸಂಬಂಧವೇ ಕಾರಣ. ಅಂಥ ಕಲಿಕೆಯು ಮಕ್ಕಳು ತಾಯಿಯ ಗರ್ಭದಲ್ಲಿದ್ದಾಗಲೇ ಆರಂಭವಾಗುತ್ತದೆ’ ಎಂದು ಒಪಿಐಎಸಿ ಶ್ಲಾಘಿಸಿದೆ.

ಕಾಡಿನ ಬಗ್ಗೆ ಮಕ್ಕಳಿಗಿರುವ ಜ್ಞಾನವೇ ಅವರು ಬದುಕಿ ಬರುವಂತೆ ಮಾಡುತ್ತದೆ ಎಂಬ ವಿಶ್ವಾಸವು ಮಕ್ಕಳ ಕುಟುಂಬ ಸದಸ್ಯರಿಗಿತ್ತು. ‘ಕಾಡಿನ ಮಕ್ಕಳು’ ಎಂದು ಅವರನ್ನು ಮಕ್ಕಳ ಅಜ್ಜ ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.