ನ್ಯೂಯಾರ್ಕ್: ಯೆಹೂದಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿದೆ ಎಂಬ ಆರೋಪಗಳನ್ನು ಎದುರಿಸುತ್ತಿರುವ ಕೊಲಂಬಿಯಾ ವಿಶ್ವವಿದ್ಯಾಲಯ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಪರಿಹಾರ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಿಂದಿರುಗಿಸಲು ಮುಂದಾಗಿದೆ.
ಈ ಸಂಬಂಧ ಶೀಘ್ರವೇ ಸರ್ಕಾರದ ಜೊತೆ ಕೊಲಂಬಿಯಾ ವಿ.ವಿ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಹಿಂದಿರುಗಿಸಬೇಕಾದ ಮೊತ್ತವು ಅಂದಾಜು ₹1,700 ಕೋಟಿಗೂ (200 ಮಿಲಿಯನ್ ಡಾಲರ್) ಅಧಿಕವಾಗಬಹುದು ಎಂದು ಅಂದಾಜಿಸಲಾಗಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳು ಮುಂದಿನ ವಾರ ಶ್ವೇತಭವನದಲ್ಲಿ ಟ್ರಂಪ್ ಆಪ್ತರನ್ನು ಭೇಟಿ ಮಾಡಿ, ಒಪ್ಪಂದವನ್ನು ಅಂತಿಮಗೊಳಿಸಲು ಸಾಧ್ಯತೆ ಇದೆ ಎಂದು ವರದಿ ಮಾಡಿದೆ.
‘ಸರ್ಕಾರದೊಂದಿಗೆ ಈ ವಿಚಾರಕ್ಕೆ ಸಂಬಂಧಿಸಿ ಸಮಾಲೋಚನೆ ನಡೆಸಲಾಗುತ್ತಿದೆ. ಪರಿಹಾರ ರೂಪದಲ್ಲಿ ಹಣ ಹಿಂದಿರುಗಿಸುವ ಕುರಿತು ಇನ್ನೂ ಯಾವುದೇ ಒಪ್ಪಂದ ಆಗಿಲ್ಲ’ ಎಂದು ವಿಶ್ವವಿದ್ಯಾಲಯ ವಕ್ತಾರ ವರ್ಜಿನಿಯಾ ಲ್ಯಾಮ್ ಅಬ್ರಾಮ್ಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.