
ಶೇಖ್ ಹಸೀನಾ
ಢಾಕಾ/ನವದೆಹಲಿ: 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಅಲ್ಲಿನ ಆಗಿನ ಪ್ರಧಾನಿ ಶೇಖ್ ಹಸೀನಾ ‘ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ’ ಎಂದು ತೀರ್ಮಾನಿಸಿರುವ ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, 78 ವರ್ಷದ ಹಸೀನಾ ಅವರಿಗೆ ಸೋಮವಾರ ಮರಣ ದಂಡನೆ ವಿಧಿಸಿದೆ.
ಮೀಸಲಾತಿ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಳೆದ ಜುಲೈನಲ್ಲಿ ದೇಶದಾದ್ಯಂತ ತೀವ್ರ ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನಕಾರರನ್ನು ನಿಯಂತ್ರಿಸಲು ಅವರ ಮೇಲೆ ಗುಂಡು ಹಾರಿಸಲು ಸೇನೆ ಮತ್ತು ಪೊಲೀಸರಿಗೆ ಹಸೀನಾ ಅವರು ಆದೇಶಿಸಿದ್ದರು.
ಆಗಸ್ಟ್ 5ರಂದು ಢಾಕಾದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಆರು ಮಂದಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು ಮತ್ತು ಅವರ ಹತ್ಯೆ ಮಾಡಲು ಆದೇಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಲಾಗಿದೆ.
ಪ್ರತಿಭಟನೆಯು ತೀವ್ರಗೊಳ್ಳುತ್ತಿದ್ದಂತೆ ಹಸೀನಾ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಆಗಸ್ಟ್‌ನಲ್ಲಿಯೇ ಬಾಂಗ್ಲಾವನ್ನು ತೊರೆದಿದ್ದರು. ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಹಸೀನಾ ಅವರು ಪಲಾಯನ ಮಾಡಿದ ಬಳಿಕ ಸರ್ಕಾರ ಪತನವಾಗಿತ್ತು. ಸದ್ಯ ಮಧ್ಯಂತರ ಸರ್ಕಾರ ಅಧಿಕಾರದಲ್ಲಿದೆ.
‘ಹಸೀನಾ ಅವರು ಪ್ರತಿಭಟನೆಯನ್ನು ದಮನ ಮಾಡುವ ಸಲುವಾಗಿ ನಡೆಸಿದ ಹಿಂಸೆಯ ‘ಮಾಸ್ಟರ್‌ಮೈಂಡ್’ ಆಗಿದ್ದಾರೆ. ಹಸೀನಾ ಅವರೇ ತಪ್ಪಿತಸ್ಥರು ಎಂಬುದನ್ನು ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ಸಾಬೀತು ಮಾಡಲಾಗಿದೆ’ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ಮೃತರ ಕುಟುಂಬಗಳ ಸಂತಸ: ಪ್ರತಿಭಟನೆ ವೇಳೆ ಮೃತಪಟ್ಟ ಮತ್ತು ಗಾಯಗೊಂಡ ಕುಟುಂಬದವರು ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಐಜಿಪಿ ಮಾಮೂಮ್ ಅವರಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕುಟುಂಬಗಳು, ಈ ಕುರಿತು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿವೆ. ಹಸೀನಾ ಅವರನ್ನು ಭಾರತವು ವಿಳಂಬ ಮಾಡದೆಯೇ ಬಾಂಗ್ಲಾದೇಶಕ್ಕೆ ವಾಪಸು ಕಳುಹಿಸಬೇಕು ಎಂದೂ ಒತ್ತಾಯಿಸಿವೆ.
ಪ್ರಕರಣದ ಹಾದಿ
2024ರ ಜುಲೈ–ಆಗಸ್ಟ್‌ನಲ್ಲಿ ಪ್ರತಿಭಟನೆ ನಡೆದಿದ್ದು, ಇದೇ ವೇಳೆ ಹಿಂಸಾಚಾರವೂ ನಡೆದಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು
2025ರ ಮೇ ತಿಂಗಳಲ್ಲಿ 135 ಪುಟಗಳ ಆರೋಪಪಟ್ಟಿ ಸಲ್ಲಿಕೆ. ಇದಕ್ಕೆ ಪೂರಕವಾಗಿ 8,747 ಪುಟಗಳ ದಾಖಲೆ ಹಾಗೂ ಸಾಕ್ಷ್ಯಗಳ ಸಲ್ಲಿಕೆ
ಜುಲೈ 10ಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ
ಆಗಸ್ಟ್ 4ರಿಂದ ವಿಚಾರಣೆ ಆರಂಭ
ಅಕ್ಟೋಬರ್ 23ಕ್ಕೆ ವಿಚಾರಣೆ ಅಂತ್ಯ
453 ಪುಟಗಳ ತೀರ್ಪು ಬರೆದ ನ್ಯಾಯಮಂಡಳಿ
ಎಷ್ಟೇ ಪ್ರಭಾವಶಾಲಿಯಾಗಿರಲಿ ಅಧಿಕಾರಸ್ಥರೇ ಆಗಿರಲಿ ಕಾನೂನಿಗಿಂತ ಯಾರೂ ಮೇಲಿಲ್ಲ. ಈ ಮೂಲಭೂತ ತತ್ವವನ್ನು ಇಂದಿನ ತೀರ್ಪು ನಿರೂಪಿಸಿದೆಮೊಹಮ್ಮದ್ ಯೂನುಸ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ
‘ನನಗೆ ಭಯವಿಲ್ಲ’
ಜನಾದೇಶವನ್ನೇ ಪಡೆಯದ ಸರ್ಕಾರದಿಂದ ಈ ನ್ಯಾಯಮಂಡಳಿಯನ್ನು ರಚಿಸಲಾಗಿದೆ. ಇಂಥ ಮೋಸದ ನ್ಯಾಯಮಂಡಳಿಯ ನೀಡಿದ ತೀರ್ಪು ಇದು. ಈ ತೀರ್ಪು ರಾಜಕೀಯ ಪ್ರೇರಿತವಾಗಿದ್ದು ಪಕ್ಷಪಾತಿಯಾಗಿದೆ. ಮರಣದಂಡನೆ ವಿಧಿಸಿರುವುದು ಅಸಹ್ಯಕರ. ಜನರಿಂದ ಆಯ್ಕೆಯಾಗಿದ್ದ ಪ್ರಧಾನಿಯೊಬ್ಬರನ್ನು ಮತ್ತು ಅವಾಮಿ ಲೀಗ್ ಪಕ್ಷವನ್ನು ಅಳಿಸಿ ಹಾಕುವ ಉದ್ದೇಶವು ಮಧ್ಯಂತರ ಸರ್ಕಾರಕ್ಕಿದೆ ಎಂಬುದನ್ನು ಇದು ತೋರಿಸುತ್ತದೆ. ಎಲ್ಲ ಸಾಕ್ಷ್ಯಗಳನ್ನು ನ್ಯಾಯಯುತವಾಗಿ ತುಲನೆ ಮಾಡುವ ನ್ಯಾಯಮಂಡಳಿಯ ಎದುರು ನನ್ನ ಮೇಲೆ ಆರೋಪ ಹೊರಿಸಿದವರನ್ನು ಎದುರಿಸಲು ನಾನು ಭಯಪಡುವುದಿಲ್ಲಶೇಕ್ ಹಸೀನಾ ಬಾಂಗ್ಲಾದ ಮಾಜಿ ಪ್ರಧಾನಿ
ಹಸೀನಾ ಮತ್ತು ಕಮಾಲ್ ಅವರನ್ನು ತಕ್ಷಣವೇ ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿ. ಅಪರಾಧಿಗಳಿಗೆ ಆಶ್ರಯ ನೀಡುವುದು ಎರಡೂ ದೇಶಗಳ ಸ್ನೇಹಕ್ಕೆ ಮತ್ತು ನ್ಯಾಯದಾನಕ್ಕೆ ಮಾಡುವ ಅಪಚಾರ ಎಂದೇ ಭಾವಿಸಬೇಕಾಗುತ್ತದೆ. ಜೊತೆಗೆ ನಮ್ಮ ನಡುವಿನ ಹಸ್ತಾಂತರ ಒಪ್ಪಂದದ ಅನ್ವಯವೂ ಈ ಇಬ್ಬರನ್ನೂ ನಮಗೆ ಹಸ್ತಾಂತರಿಸಲೇಬೇಕುಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ
ನ್ಯಾಯಮಂಡಳಿಯ ತೀರ್ಪನ್ನು ಭಾರತವು ಗಮನಿಸಿದೆ. ಬಾಂಗ್ಲಾದೇಶವು ನೆರೆಯ ದೇಶವಾಗಿದ್ದು ಭಾರತವು ಎರಡೂ ದೇಶಗಳ ಜನರ ಹಿತಾಸಕ್ತಿಗೆ ಬದ್ಧವಾಗಿದೆ. ಶಾಂತಿ ಪ್ರಜಾಪ್ರಭುತ್ವ ಮತ್ತು ಸ್ಥಿರತೆ ವಿಚಾರದಲ್ಲಿಯೂ ನಮಗೆ ಬದ್ಧತೆ ಇದೆ. ನಾವು ಎಲ್ಲರೊಂದಿಗೂ ಸಕಾರಾತ್ಮಕವಾಗಿ ಇರಲಿದ್ದೇವೆಭಾರತದ ವಿದೇಶಾಂಗ ಸಚಿವಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.