ನ್ಯೂಯಾರ್ಕ್: ‘ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ಭವಿಸಿದ್ದ ಸಂಘರ್ಷವನ್ನು ಅಮೆರಿಕ ಶಮನಗೊಳಿಸಿತು. ಶಾಂತಿ ಬಯಸೋಣ ಮತ್ತು ಈಗ ನಾವು ವ್ಯಾಪಾರ ಒಪ್ಪಂದ ಮಾಡಿಕೊಳ್ಳೋಣ ಎಂದು ಆ ದೇಶಗಳನ್ನು ಒಪ್ಪಿಸಿ ನಾನು ಉತ್ತಮ ಕೆಲಸ ಮಾಡಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಸೌದಿ ಅರೇಬಿಯಾಗೆ ಅಧಿಕೃತ ಭೇಟಿ ನೀಡುವ ಮೊದಲ ತಮ್ಮ ವಿಮಾನದಲ್ಲಿ ‘ಫಾಕ್ಸ್ ನ್ಯೂಸ್’ ಪತ್ರಿಕೆಗೆ ಟ್ರಂಪ್ ಅವರು ಸಂದರ್ಶನ ನೀಡಿದ್ದು ಈ ವೇಳೆ ಅವರು ಭಾರತ–ಪಾಕಿಸ್ತಾನ ಸಂಘರ್ಷ ಶಮನಕ್ಕೆ ಮಧ್ಯಸ್ಥಿಕೆ ವಹಿಸಿದ ಕುರಿತು ಮಾತನಾಡಿದರು.
ಭಾರತ–ಪಾಕಿಸ್ತಾನದ ಮಧ್ಯೆ ಸಂಘರ್ಷ ಶಮನಗೊಂಡಿದೆ ಎಂಬ ಮಾಹಿತಿಯನ್ನು ಶನಿವಾರ ಮೊದಲು ನೀಡಿದ್ದೇ ಟ್ರಂಪ್. ಅಲ್ಲಿಂದ ಈಚೆಗೆ ‘ಮಧ್ಯಸ್ಥಿಕೆ ವಹಿಸಿದ್ದೇನೆ’ ಎಂದು ವಿವಿಧೆಡೆ ಟ್ರಂಪ್ ಅವರು ಐದು ಬಾರಿ ಮಾತನಾಡಿದ್ದಾರೆ. ಸೌದಿ ಅರೇಬಿಯಾಗೆ ತೆರಳಿದ ಬಳಿಕ ಅಲ್ಲಿ ನಡೆದ ‘ಸೌದಿ–ಅಮೆರಿಕ ಹೂಡಿಕೆದಾರರ ಸಮಾವೇಶ’ದಲ್ಲಿಯೂ ಅವರು ಇದೇ ಮಾತುಗಳನ್ನು ಆಡಿದ್ದಾರೆ.
ಆದರೆ, ಟ್ರಂಪ್ ಅವರ ಈ ಹೇಳಿಕೆಯನ್ನು ಭಾರತ ಅಲ್ಲಗಳೆದಿದೆ. ‘ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು (ಡಿಜಿಎಂಒ) ಪರಸ್ಪರ ಮಾತುಕತೆ ನಡೆಸಿ ನಿರ್ಧಾರಕ್ಕೆ ಬಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿ ಮಧ್ಯಸ್ಥಿಕೆ ವಹಿಸಿಲ್ಲ’ ಎಂದು ಭಾರತ ಸರ್ಕಾರ ಹೇಳಿದೆ.
* ನಾನು ಬಹಳ ಕಷ್ಟಪಟ್ಟಿದ್ದೇನೆ. ಆದರೆ ಇಡೀ ಪ್ರಕ್ರಿಯೆಯನ್ನು ಆನಂದಿಸಿದ್ದೇನೆ. ಇಷ್ಟೆಲ್ಲಾ ಕಷ್ಟಪಟ್ಟರೂ ಕೈಗೆ ಏನೂ ಸಿಗುವುದಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ನಮಗೆ ಬಹಳಷ್ಟು ಸಿಗುತ್ತಿತ್ತು. ಭಾರತ–ಪಾಕಿಸ್ತಾನದ ಮಧ್ಯೆ ಏನು ನಡೆಯುತ್ತಿತ್ತೊ ಅದು ನನಗೆ ಇಷ್ಟವಾಗಲಿಲ್ಲ. ಅವರು ಅಣ್ವಸ್ತ್ರ ರಾಷ್ಟ್ರಗಳು ಬೇರೆ. ಅವರ ಬಳಿ ದೊಡ್ಡ ಮಟ್ಟದ ಅಣ್ವಸ್ತ್ರ ಸಂಗ್ರಹ ಇದೆ.
* ಒಂದು ವೇಳೆ ಅವರೇನಾದರೂ ಅಣ್ವಸ್ತ್ರ ಬಳಕೆ ಮಾಡಿಬಿಟ್ಟಿದ್ದರೆ ಬಹಳ ಕೆಟ್ಟದ್ದಾಗುತ್ತಿತ್ತು. ಬಹಳ ಸಣ್ಣ ಪ್ರಮಾಣದ ಅಣ್ವಸ್ತ್ರ ಬಳಕೆ ಕೂಡ ಲಕ್ಷಗಟ್ಟಲೆ ಜೀವಗಳನ್ನು ಕೊಂದುಬಿಡುತ್ತಿತ್ತು. ನಾನು ಮಾರ್ಕೊ (ವಿದೇಶಾಂಗ ಕಾರ್ಯದರ್ಶಿ) ವ್ಯಾನ್ಸ್ (ಅಮೆರಿಕ ಉಪಾಧ್ಯಕ್ಷ) ನಮ್ಮ ತಂಡ ಎಲ್ಲರೂ ಉತ್ತಮ ಕೆಲಸ ಮಾಡಿದ್ದೇವೆ.
* ಶಾಂತಿ ಒಪ್ಪಂದಕ್ಕೆ ನಾವು ಒಪ್ಪಿಸಿದೆವು. ನಾನು ವ್ಯಾಪಾರ ಒಪ್ಪಂದ ಮಾಡಿಕೊಳ್ಳೋಣ. ಅಣ್ವಸ್ತ್ರಗಳಿಗಿಂತ ನಮಗೆ ವ್ಯಾಪಾರ ಒಪ್ಪಂದವೇ ಇಷ್ಟ ಎಂದು ಹೇಳಿದೆ.
*ಎರಡೂ ದೇಶಗಳಲ್ಲಿಯೂ ಬಹಳ ಉತ್ತಮ ನಾಯಕರಿದ್ದಾರೆ. ಅವರು ನನಗೆ ಬಹಳ ಪರಿಚಯಸ್ಥರು ಕೂಡ. ಅಣ್ವಸ್ತ್ರ ಕ್ಷಿಪಣಿಗಳನ್ನು ವ್ಯಾಪಾರ ಮಾಡುವುದು ಬೇಡ. ನಿಮ್ಮನ್ನು ಅಂದಗೊಳಿಸುವಂತ ವಸ್ತುಗಳ ವ್ಯಾಪಾರ ಮಾಡೋಣ ಎಂದು ಹೇಳಿದೆ. ಬಳಿಕ ಎಲ್ಲವೂ ನಿಂತು ಹೋಯಿತು.
‘ಅಮೆರಿಕದ ಅಪ್ಪ ಯುದ್ಧ ನಿಲ್ಲಿಸಿದರೇ?’
ಭಾರತ–ಪಾಕಿಸ್ತಾನದ ಮಧ್ಯೆ ಕದನವಿರಾಮ ಘೋಷಣೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕೆಲವು ದಿನಗಳ ಹಿಂದೆ ನಾವು ತಿಳಿದುಕೊಂಡೆವು. ‘ವ್ಯಾಪರ ಒಪ್ಪಂದ ಮಾಡಿಕೊಳ್ಳಿ ಎನ್ನುವ ಆಮಿಷ ಮತ್ತು ನಿರ್ಬಂಧ ಎದುರಿಸಿ ಎನ್ನುವ ಬೆದರಿಕೆ ಒಡ್ಡಿ ಬಲವಂತವಾಗಿ ಮತ್ತು ಬ್ಲ್ಯಾಕ್‌ಮೇಲ್ ಮಾಡಿ ಕದನ ವಿರಾಮಕ್ಕೆ ಒಪ್ಪಿಸಿದ್ದೇನೆ’ ಎಂದು ಈಗ ಸೌದಿ ಅರೇಬಿಯಾದಲ್ಲಿ ಟ್ರಂಪ್ ಹೇಳಿದ್ದಾರೆ. ಯಾವಾಗಲೂ ಮಾತನಾಡುತ್ತಲೇ ಇರುವ ನಮ್ಮ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರು ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ? ಅಮೆರಿಕದ ಒತ್ತಡಕ್ಕೆ ಮಣಿದು ಇಬರಿಬ್ಬರು ಭಾರತದ ಭದ್ರತೆಯನ್ನು ಅಡವಿಟ್ಟರೇ? ಅಮೆರಿಕಿ ಪಾಪಾ (ಅಮೆರಿಕದ ಅಪ್ಪ) ಯುದ್ಧ ನಿಲ್ಲಿಸಿದರೇ?ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.